ಬೆಂಗಳೂರು:ಶಾಸಕರ ಪುತ್ರನ ಬಂಧನದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿದ್ದು, "ಕಾನೂನಿನ ಮುಂದೆ ಶಾಸಕರೇ ಆಗಲಿ, ಜನಸಾಮಾನ್ಯ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಯಾರೇ ಆಗಲಿ ಎಲ್ಲರೂ ಒಂದೇ. ಕಾನೂನಾತ್ಮಕವಾಗಿ ಏನು ಶಿಕ್ಷೆ ಆಗಬೇಕೋ ಅದು ಆಗಿಯೇ ಆಗುತ್ತದೆ. ತನಿಖಾ ಹಂತದ ಕುರಿತು ಈಗ ಚರ್ಚಿಸುವ ಅಗತ್ಯವಿಲ್ಲ. ನಮ್ಮ ಸಿಬ್ಬಂದಿಗೆ ಆ ಬಗ್ಗೆ ನನ್ನ ನಿರ್ದೇಶನದ ಅಗತ್ಯವೂ ಇಲ್ಲ" ಎಂದಿದ್ದಾರೆ.
"ದಾಳಿ ಸಂದರ್ಭದಲ್ಲಿ ಆರೋಪಿಯ ಬಳಿ 2 ಕೋಟಿ 2 ಲಕ್ಷ ರೂ ಹಾಗೂ ಆತನ ಮನೆಯಲ್ಲಿ ಶೋಧ ನಡೆಸಿದಾಗ 6 ಕೋಟಿ 10 ಲಕ್ಷ ರೂಪಾಯಿ ಹಣ ದೊರೆತಿದೆ. ಆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುತ್ತೇವೆ. ಸತ್ಯಾಸತ್ಯತೆ ಕುರಿತು ಮುಂದಿನ ತನಿಖೆ ಮಾಡಲಾಗುತ್ತದೆ. ಲಂಚ ಸ್ವೀಕರಿಸುತ್ತಿರುವ ಬಗ್ಗೆ ಮುಂದೆ ಬಂದು ದೂರು ನೀಡಿದವರು ಹಾಗೂ ಚಾಕಚಕ್ಯತೆಯಿಂದ ಕಾರ್ಯಾಚರಣೆ ಕೈಗೊಂಡ ನಮ್ಮ ಲೋಕಾಯುಕ್ತ ಸಿಬ್ಬಂದಿಯನ್ನು ಶ್ಲಾಘಿಸಬೇಕು."
"ಈಗ ಲಂಚ ಸ್ವೀಕರಿಸುತ್ತಿರುವ ಬಗ್ಗೆ ದೂರು ನೀಡಿದವರ ರೀತಿಯ ಧೈರ್ಯ ಎಲ್ಲ ಸಾರ್ವಜನಿಕರಲ್ಲಿ ಬರಬೇಕು. ಧೈರ್ಯವಾಗಿ ನಮ್ಮ ಮುಂದೆ ಬಂದಾಗ ಈ ರೀತಿಯ ಎಂಥ ತಿಮಿಂಗಿಲಗಳಾದರೂ ಹಿಡಿದು ಹಾಕಲು ಸಾಧ್ಯ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಈ ಪ್ರಕರಣದಲ್ಲಿ ನಾವು ಈಗಾಗಲೇ ಐದು ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ದಾಳಿ ನಡೆಸಿದಾಗ ಲಂಚ ಸ್ವೀಕರಿಸುತ್ತಿದ್ದ ಪ್ರಶಾಂತ್ ಮಾಡಾಳ್ ಹಾಗೂ ಅವರ ಅಕೌಂಟೆಂಟ್ ಮತ್ತು ಅಲ್ಲಿ ಲಂಚ ನೀಡುತ್ತಿದ್ದ ಮೂರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಲಂಚ ನೀಡುವುದು ಕೂಡ ಅಪರಾಧವಾಗಿರುವುದರಿಂದ ಅವರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದರು.