ಬೆಂಗಳೂರು:ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಕೆಲಸ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಆಲಮಟ್ಟಿ ಅಣೆಕಟ್ಟು ಎತ್ತರವನ್ನು ಹೆಚ್ಚಿಸುವ ವಿಚಾರ ಪ್ರಸ್ತಾಪಿಸುತ್ತಾ, ಯಡಿಯೂರಪ್ಪ ಅವರು ಚುನಾವಣೆ ಮೊದಲು ಮತ್ತು ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದರು. ಈಗಲಾದರೂ ಎತ್ತರ ಹೆಚ್ಚಿಸುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪು ಗೆಜೆಟ್ ಅಧಿಸೂಚನೆ ಪ್ರಕಟಣೆಯಾದ ನಂತರ ಯೋಜನೆಯ ವರದಿಗೆ ಸಕ್ಷಮ ಪ್ರಾಧಿಕಾರಗಳ ತಿರುವಳಿಯೊಂದಿಗೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀ.ಯಿಂದ 524.25 ಮೀ.ವರೆಗೆ ಎತ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯದ ಮಾನ್ಯ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪುನ್ನು ಆದ್ಯತೆ ಮೇರೆಗೆ ಗೆಜೆಟ್ ಪ್ರಕಟಣೆ ಮಾಡುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಬಾಕಿ ಇರಿಸಿ ರಾಜ್ಯವು ಸಲ್ಲಿಸಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ವಿವರವಾದ ಯೋಜನಾ ವರದಿಯ ಅಪ್ರೈಸಲ್ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಲು ಈ ಸಂದರ್ಭದಲ್ಲಿ ಮನವಿ ಮಾಡಲಾಗಿದೆ ಎಂದು ಉತ್ತರಿಸಿದರು.
2011ರ ಸುಪ್ರೀಂಕೋರ್ಟ್ ತೀರ್ಪಿನಂತೆ ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಲಾಗಿದೆ. ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನ ಕುರಿತಾಗಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಗಳು ಇತ್ಯರ್ಥವಾಗಬೇಕಿದೆ. ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸುವಂತೆ ಮತ್ತು ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ಪ್ರಕಟಣೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ 2019ರಂದು ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿ ಸಲ್ಲಿಸಿದೆ ಎಂದರು.
ಇದನ್ನೂ ಓದಿ:ವಿಧಾನಸಭೆ ಕಲಾಪ: ಮೈಸೂರು ಹಿಂದಿನ ಡಿಸಿ ವಿರುದ್ಧ ಸಾ.ರಾ.ಮಹೇಶ್ ರೋಷಾವೇಶ!