ಬೆಂಗಳೂರು: ಕೋವಿಡ್ ಸೋಂಕು ಕಾಣಿಸಿಕೊಂಡ ಮೇಲಂತೂ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚು ಉಲ್ಬಣಗೊಳ್ತಿವೆ. ಜೊತೆಗೆ, ಕೋವಿಡ್ ಸೋಂಕು ತಗುಲಿದವರ ಮೇಲೂ ನಿಧಾನಗತಿಯ ದುಷ್ಪರಿಣಾಮ ಬಿರುತ್ತಿದೆ. ಅದರಲ್ಲೂ ಹೃದಯದ ಪಾಡು ಹೃದಯವೇ ಕೇಳದಂತಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಕನಿಷ್ಠ 3 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹಠಾತ್ ಹೃದಯಾಘಾತವನ್ನು ತಪ್ಪಿಸಿಕೊಳ್ಳಬಹುದು ಅಂತಾರೆ ತಜ್ಞರು.
ಕೋವಿಡ್ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇದೆಯಂತೆ. ಅದರಲ್ಲೂ 50 ವರ್ಷದೊಳಗಿನ ಹಾಗೂ ಕೋವಿಡ್ನಿಂದ ಹೆಚ್ಚು ಬಾಧಿತರೇ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕೋವಿಡ್ನಿಂದ ಗುಣವಾದ ಬಳಿಕ ಜಾಗೃತೆವಹಿಸಬೇಕು ಎಂದು ಫೋರ್ಟಿಸ್ ಆಸ್ಪತ್ರೆ ಹೃದಯತಜ್ಞ ಡಾ.ಆರ್.ಕೇಶವ ಹೇಳುತ್ತಾರೆ.
ಫೋರ್ಟಿಸ್ ಹೃದಯತಜ್ಞ ಡಾ.ಆರ್.ಕೇಶವ ಜಯದೇವ ಆಸ್ಪತ್ರೆ ತಜ್ಞರ ಅಧ್ಯಯನ:
ಇತ್ತೀಚೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಿಂದ ನಡೆಸಿದ ಅಧ್ಯಯನದಲ್ಲಿ ಕೋವಿಡ್ನಿಂದ ಗುಣಮುಖರಾದ 3-4 ವಾರಗಳ ಬಳಿಕ ಹೃದಯಾಘಾತ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಎರಡನೇ ಅಲೆಯಲ್ಲಿ ವಯಸ್ಕರಿಗೇ ಹೆಚ್ಚಾಗಿ ಕೋವಿಡ್ ಬಾಧಿಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರು ದೈಹಿಕವಾಗಿ ಸಂಪೂರ್ಣ ನಿಶ್ಶಕ್ತಿ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು.
ನಿಮ್ಮ ಹೃದಯದ ಆರೈಕೆ ಹೀಗಿರಲಿ..
ಪ್ರಮುಖವಾಗಿ, ಕೋವಿಡ್ನಿಂದ ಗುಣವಾದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುತ್ತೆ. ಹೀಗಾಗಿ ದೇಹಕ್ಕೆ ಅಗತ್ಯ ಪೌಷ್ಟಿಕಾಹಾರ ನೀಡುವುದು, ವ್ಯಾಯಾಮ, ಯೋಗ, ಧ್ಯಾನ ಮಾಡುವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು, ಜಂಕ್ ಫುಡ್ ಸೇವನೆ ನಿಯಂತ್ರಣ ಸೇರಿದಂತೆ ಇತರೆ ಅನಾರೋಗ್ಯಕರ ಹವ್ಯಾಸವನ್ನು ತ್ಯಜಿಸಿ, ಹೃದಯದ ಆರೈಕೆಗೆ ಒತ್ತು ನೀಡಬೇಕು. ಅಲ್ಲದೆ, ಕೆಲಸದ ಒತ್ತಡ ಕೂಡ ಹೃದಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹೀಗಾಗಿ ಕನಿಷ್ಠ 3 ತಿಂಗಳು ಹೃದಯದ ಆರೋಗ್ಯದತ್ತ ಎಚ್ಚರಿಕೆಯಿಂದಿರುವುದು ಒಳ್ಳೆಯದು.
ಯುವಕರೇ, ನಿಮ್ಮ ಹೃದಯದ ಬಗ್ಗೆ ಇರಲಿ ಎಚ್ಚರ:
ಹಿಂದೆಲ್ಲಾ ಯುವಕರಲ್ಲಿ ಹೃದಯಾಘಾತದ ಬಗ್ಗೆ ಎಲ್ಲೋ ಒಂದೊಂದು ಪ್ರಕರಣ ಕೇಳುತ್ತಿದ್ದೆವು. ಆದರೀಗ 45 ವರ್ಷ ಒಳಗಿನ ಮಧ್ಯವಯಸ್ಕರಲ್ಲಿ ಹೃದಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಳವಾಗಿದೆ. 2017ರ ಅಧ್ಯಯನದ ಪ್ರಕಾರ, ವರ್ಷಕ್ಕೆ 4 ಲಕ್ಷ ಮಧ್ಯವಯಸ್ಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಯುವಕರು ಜೀವನಶೈಲಿಯಲ್ಲಿ ಶಿಸ್ತು ರೂಢಿಸಿಕೊಂಡರೆ ಹೃದಯಾಘಾತದಿಂದ ಪಾರಾಗಬಹುದು.
ಹೃದಯದ ಸಮಸ್ಯೆ ಇರುವವರು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಕೋವಿಡ್ನಿಂದಾಗಬಹುದಾದ ಆರೋಗ್ಯ ಸಮಸ್ಯೆಯನ್ನು ಲಸಿಕೆ ತಡೆಯುವುದರಿಂದ ಹೃದಯದ ಸಮಸ್ಯೆ ಇರುವವರ ಆರೋಗ್ಯ ಸುಧಾರಿಸಲಿದೆ. ಶೇ.70ರಷ್ಟು ಹೃದಯ ಸಮಸ್ಯೆ ಇರುವವರು ಲಸಿಕೆ ಪಡೆಯಲಾಗಿದೆ ಎನ್ನಲಾಗಿದೆ. ಲಸಿಕೆ ಪಡೆಯದೇ ಇರುವವರು ಕೂಡಲೇ ಲಸಿಕೆ ಪಡೆದುಕೊಂಡರೆ, ಮೂರನೇ ಅಲೆಯಲ್ಲಿ ಆಗಬಹುದಾದ ಅನಾಹುತ ತಡೆಯಬಹುದು ಎಂದರು.