ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ಜರುಗುತ್ತಿವೆ.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ವಿವಿಧ ಒಕ್ಕಲಿಗ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಲು ಸಭೆ ಕರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷನ ನಿವಾಸದಲ್ಲಿಯೇ ಭೇಟಿಯಾಗಲು ಸಹ ಅವರು ಚಿಂತನೆ ನಡೆಸಿದ್ದಾರೆ. ಈ ಮಧ್ಯ ಸಾಕಷ್ಟು ಚರ್ಚೆ ನಡೆಸಿರುವ ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ನಾಯಕರನ್ನು ಸಹ ಈ ವಿಚಾರ ಬೆಂಬಲಿಸುವಂತೆ ಕೋರುವ ಸಾಧ್ಯತೆ ಇದೆ.
ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಿ ಕೆಲ ನಾಯಕರುಗಳು ಒತ್ತಡ ಹೇರುತ್ತಿದ್ದು ಶಿವಾನಂದ ವೃತ್ತ ಸಮೀಪದ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಭೇಟಿಯಾದ ಲತಾ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಪಕ್ಷೇತರ ಅಭ್ಯರ್ಥಿ ಹರಪನಹಳ್ಳಿಯಿಂದ ಗೆಲುವು ಸಾಧಿಸಿರುವ ಇವರು ತಮ್ಮ ತಂದೆ ಎಂಪಿ ಪ್ರಕಾಶ್ ಅವರು ಕಾಂಗ್ರೆಸ್ನಲ್ಲಿಯೇ ಇದ್ದ ಹಿನ್ನೆಲೆ ತಾವು ಸಹ ಕಾಂಗ್ರೆಸ್ ಬೆಂಬಲಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಾದರೆ ಕಾಂಗ್ರೆಸ್ ಬೆಂಬಲಿಸುವುದೇ ಸೂಕ್ತ ಎಂದು ತೀರ್ಮಾನಿಸಿರುವ ಅವರು ಬೇಷರತ್ತಾಗಿ ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾಗಿದ್ದಾರೆ.