ಕರ್ನಾಟಕ

karnataka

By

Published : May 29, 2020, 11:20 PM IST

Updated : May 29, 2020, 11:25 PM IST

ETV Bharat / state

ಸಿಗರೇಟ್ ಲಂಚ ಪ್ರಕರಣ ರದ್ದು ಕೋರಿ ಅರ್ಜಿ: ಪ್ರತಿವಾದಿಗಳಿಗೆ ಹೈಕೋರ್ಟ್​ ನೋಟಿಸ್

ಕಾಟನ್ ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಎಸಿಪಿ ಪ್ರಭುಶಂಕರ್ ಸಲ್ಲಿಸಿರುವ ಕ್ರಿಮಿನಲ್ ಮನವಿಗಳನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ACP Prabhushankar seeks repeal of cigarette bribery case
ಪ್ರತಿವಾದಿಗಳಿಗೆ ನೋಟಿಸ್

ಬೆಂಗಳೂರು: ಸಿಗರೇಟ್ ವ್ಯಾಪಾರಿಗಳಿಂದ ಹಣ ಪಡೆದ ಆರೋಪದಡಿ ದಾಖಲಿಸಿರುವ 2 ಪ್ರತ್ಯೇಕ ಎಫ್ಐಆರ್​ಗಳನ್ನು ರದ್ದುಪಡಿಸುವಂತೆ ಕೋರಿ ಎಸಿಪಿ ಪ್ರಭುಶಂಕರ್ ಹೈಕೋರ್ಟ್​​​​​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ತಮ್ಮ ವಿರುದ್ಧ ಕಾಟನ್​​ಪೇಟೆ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್​ಗಳನ್ನು ರದ್ದುಪಡಿಸುವಂತೆ ಕೋರಿ ಎಸಿಪಿ ಪ್ರಭುಶಂಕರ್ ಸಲ್ಲಿಸಿರುವ ಕ್ರಿಮಿನಲ್ ಮನವಿಗಳನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ ಪ್ರತಿವಾದಿಗಳಾದ ಕಾಟನ್ ಪೇಟೆ ಠಾಣೆ ಪೊಲೀಸರು, ಸಿಸಿಬಿ ಮತ್ತು ದೂರುದಾರ ಶಾಜಿ ಜಾರ್ಜ್ ಥಾಮಸ್ ಹಾಗೂ ಆದಿಲ್ ಅಜೀಜ್​​​​​ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿತು.

ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡಲು ನೆರವು ನೀಡುವುದಾಗಿ ತಿಳಿಸಿ ಸಿಸಿಬಿ ಎಸಿಪಿ ಪ್ರಭುಶಂಕರ್ ವ್ಯಾಪಾರಿಗಳಿಂದ 62 ಲಕ್ಷ ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೇ 7ರಂದು ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದರು. ಇದೀಗ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಪ್ರಭುಶಂಕರ್, ತಮ್ಮ ವಿರುದ್ಧ ದುರುದ್ದೇಶ ಮತ್ತು ದ್ವೇಷ ಭಾವನೆಯಿಂದ ಸುಳ್ಳು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಒಂದೇ ಕೃತ್ಯಕ್ಕೆ ಮೂರು ದೂರುಗಳನ್ನು ಸಲ್ಲಿಸಿದ್ದು, ಎರಡು ಪ್ರತ್ಯೇಕ ವ್ಯವಹಾರಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಎಫ್ಐಆರ್​ಗಳನ್ನು ರದ್ದುಪಡಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವವರೆಗೆ ಎಫ್ಐಆರ್​ಗಳಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Last Updated : May 29, 2020, 11:25 PM IST

ABOUT THE AUTHOR

...view details