ಬೆಂಗಳೂರು:ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಮಾದಕ ಪದಾರ್ಥ, ಅದರ ಉಪ ಉತ್ಪನ್ನಗಳ ಸಾಗಣೆ ದಂಧೆ ನಿಯಂತ್ರಿಸುತ್ತಿದ್ದ ಕುಖ್ಯಾತ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಅಖಿಲೇಶ್ ಕುಮಾರ್ ಸಿಂಗ್ ಬಂಧಿತ ಆರೋಪಿ. 2018ರಿಂದ ವ್ಯವಸ್ಥಿತವಾಗಿ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಪಿಟ್ ಎನ್ ಡಿಪಿಎಸ್ (ಮಾದಕ ಪದಾರ್ಥ ಮತ್ತದರ ಉಪ ಉತ್ಪನ್ನಗಳ ಅಕ್ರಮ ಸಾಗಣೆ ತಡೆ ಕಾಯ್ದೆ)ಯಡಿ ಬಂಧಿಸಲಾಗಿದೆ.
ಬೆಂಗಳೂರ ಸಮೀಪದ ಬಾಗಲೂರಿನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದಿದ್ದ ಅರೋಪಿ, 8 ಜನ ಬಿಹಾರ ಮೂಲದ ಯುವಕರನ್ನು ಮಾದಕ ಸರಬರಾಜು ದಂಧೆಗೆ ನೇಮಕಗೊಳಿಸಿದ್ದ. ಅವರಿಗೆ ಬಿಹಾರದಿಂದ ವಿವಿಧ ಮಾದಕ ಪದಾರ್ಥಗಳನ್ನ ರವಾನಿಸುತ್ತಿದ್ದ. ಆರೋಪಿ ಅಖಿಲೇಶ್ ಸಿಂಗ್ ಸೂಚನೆಯಂತೆ ಬೆಂಗಳೂರಿನಲ್ಲಿದ್ದ ಆರೋಪಿಗಳು ಇಲ್ಲಿನ ಸ್ಥಳೀಯ ಮಾದಕ ಸರಬರಾಜುಗಾರರಿಗೆ ಡಿಲವರಿ ಬಾಯ್ಸ್ ಸೋಗಿನಲ್ಲಿ ತೆರಳಿ ಮಾದಕ ಪದಾರ್ಥ ಪೂರೈಕೆ ಮಾಡುತ್ತಿದ್ದರು. ಈ ಕೆಲಸಕ್ಕೆ ಪ್ರತಿಯಾಗಿ ಪ್ರತಿ ಆರೋಪಿಗಳಿಗೆ ತಿಂಗಳಿಗೆ ಮೂವತ್ತು ಸಾವಿರ ಸಂಬಳವನ್ನು ಅಖಿಲೇಶ್ ಸಿಂಗ್ ಪಾವತಿಸುತ್ತಿದ್ದ. ಈ ಮಾದಕ ವಸ್ತು ಅಕ್ರಮ ಸಾಗಣೆ ಮಾರಾಟ ದಂಧೆಯನ್ನು ಭೇದಿಸಲು ಬೆಂಗಳೂರಿನಲ್ಲಿ ವಿಶೇಷ ಪೊಲೀಸರು ತಂಡ ರಚಿಸಲಾಗಿತ್ತು.
ಅಕ್ರಮವಾಗಿ ಮಾದಕ ವಸ್ತು ಮಾರಾಟದ ಕಿಂಗ್ಪಿನ್ ಆರೋಪಿ ಅಖಿಲೇಶ್ ಕುಮಾರ್ ಸಿಂಗ್ ವಿರುದ್ದ ನಗರದ ವಿವಿಧೆಡೆ ಆರು ಪ್ರಕರಣಗಳು ದಾಖಲಾಗಿವೆ. ಆರೋಪಿ ಅಖಿಲೇಶ್ ಸಿಂಗ್ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿಟ್ ಎನ್ಡಿಪಿಎಸ್ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ತಿಳಿಸಿದ್ದಾರೆ.