ಬೆಂಗಳೂರು :ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಅಲ್ಲದೆ, ಆಕ್ಸಿಡೆಂಟ್ನಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ನವೆಂಬರ್ ಅಂತ್ಯಕ್ಕೆ ರಾಜ್ಯ ರಾಜಧಾನಿಯಲ್ಲಿ ನಡೆದ 793 ಮಾರಣಾಂತಿಕ ಅಪಘಾತಗಳಲ್ಲಿ 823 ಮಂದಿ ಬಲಿಯಾಗಿದ್ದಾರೆ.
ಅದೇ ರೀತಿ 3705 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ವರದಿಯಾಗಿದ್ದು, 3802 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ 4499 ಆಕ್ಸಿಡೆಂಟ್ ಕೇಸ್ಗಳು ದಾಖಲಾಗಿವೆ. 2022ರಲ್ಲಿ 751 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 771 ಮಂದಿ ಸಾವನ್ನಪ್ಪಿದ್ದರು. 3702 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳಲ್ಲಿ 3218 ಮಂದಿ ಗಾಯಗೊಂಡಿದ್ದರು. ಒಟ್ಟು 3218 ಆಕ್ಸಿಡೆಂಟ್ ಕೇಸ್ಗಳು ದಾಖಲಾಗಿದ್ದವು. ಕಳೆದ 11 ತಿಂಗಳಲ್ಲಿ ಪ್ರತಿದಿನಕ್ಕೆ ನಗರದಲ್ಲಿ ಸರಾಸರಿ 14 ಅಪಘಾತ ಪ್ರಕರಣ ದಾಖಲಾಗಿದ್ದರೆ, ಕಳೆದ ವರ್ಷ 9ರ ಅಸುಪಾಸಿನಲ್ಲಿತ್ತು ಎಂಬುದನ್ನ ಸಂಚಾರ ಪೊಲೀಸ್ ಇಲಾಖೆ ನೀಡಿದ ಅಂಕಿ - ಅಂಶಗಳೇ ಸ್ಪಷ್ಟಪಡಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಸಂಚಾರ ಪೊಲೀಸರು ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುತ್ತಿದ್ದಾರೆ. ರಸ್ತೆಯಲ್ಲಿ ನಿಂತು ವಾಹನಗಳನ್ನ ಅಡ್ಡಗಟ್ಟಿ ಪ್ರಕರಣ ದಾಖಲಿಸುವ ಬದಲು ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ಗೆ ಒತ್ತು ನೀಡಿದ್ದರಿಂದ ಆಯಕಟ್ಟಿನ ಜಂಕ್ಷನ್, ತಿರುವುಗಳಲ್ಲಿ ಅತ್ಯಾಧುನಿಕ ಕ್ಯಾಮರಗಳ ಮೂಲಕ ಡಿಜಿಟಲ್ ಪ್ರಕರಣಗಳನ್ನ ದಾಖಲಿಸಲಾಗುತ್ತಿದೆ. ದಿನಕ್ಕೆ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಟ್ರಾಫಿಕ್ ವೈಯಲೇಷನ್ ಕೇಸ್ಗಳನ್ನ ದಾಖಲಿಸಲಾಗುತ್ತಿದೆ. ಈ ಮಧ್ಯೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ, ವೇಗವಾಗಿ ವಾಹನ ಚಲಾಯಿಸಿ ಹೆಚ್ಚು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.
ಸ್ವಯಂ ಅಪಘಾತ ಹೆಚ್ಚು: 'ವೇಗವಾಗಿ ವಾಹನ ಚಲಾಯಿಸುವ ಭರದಲ್ಲಿ ಅಜಾಗರೂಕವಾಗಿ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡು ಎದುರು ಬರುವ ವಾಹನಗಳಿಗೆ ಅಥವಾ ಪಾದಚಾರಿಗಳ ಮೇಲೆ ಆಕ್ಸಿಡೆಂಟ್ ಮಾಡುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಹೆಲ್ಮೆಟ್ ರಹಿತ, ಮದ್ಯಸೇವನೆ ಹಾಗೂ ನಿರ್ಲಕ್ಷ್ಯದಿಂದ ಚಾಲಕರು ಅಪಘಾತವೆಸಗುತ್ತಿದ್ದಾರೆ. ಸಂಚಾರ ದಟ್ಟಣೆ ಅವಧಿಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಆದ್ಯತೆ ಜೊತೆಗೆ ಡಿಜಿಟಲ್ ಮೂಲಕ ಕೇಸ್ಗಳ ದಾಖಲಿಸುವ ಪ್ರಮಾಣ ಹೆಚ್ಚಾದಂತೆ, ವಾಹನ ಸವಾರರು ಪೊಲೀಸರು ತಮ್ಮನ್ನ ಪ್ರಶ್ನಿಸುತ್ತಿಲ್ಲ ಎಂಬ ಮನೋಭಾವ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಅಗೌರವ ಹೆಚ್ಚಾಗಿದೆ' ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.