ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ಬೆಂಗಳೂರಿನ ಶಿವಾನಂದ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಿದರು. ಕುಮಾರಕೃಪಾದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಾಗುತ್ತಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ಬಂಧಿಸಿ, ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು.
ಈ ವೇಳೆ ಪ್ರತಿಭಟನಾನಿರತರು ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ಧ ಸಂತೋಷ್ ಪಾಟೀಲ್ ಅವರಿಗೆ ನ್ಯಾಯ ಸಿಗಬೇಕೆಂದರೆ ಶೀಘ್ರವೇ ಈಶ್ವರಪ್ಪನವರ ಬಂಧನವಾಗಬೇಕು. ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದು, ಈ ಕೂಡಲೇ ಅವರನ್ನು ಬಂಧಿಸದಿದ್ದರೆ ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.