ಬೆಂಗಳೂರು: ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಅಂಕಿತಾ ವರ್ಮ ಬೆಂಗಳೂರಿಗೆ ಮರಳಿದ್ದು, ಕ್ವಾರಂಟೈನ್ ಅವಧಿಯಲ್ಲಿ ತಮ್ಮನ್ನು ಸರ್ಕಾರ, ಆರೋಗ್ಯ ಇಲಾಖೆ ನೋಡಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
'ಮೈ ಕ್ವಾರಂಟೈನ್ ಎಕ್ಸ್ ಪೀರಿಯನ್ಸ್' ಶೀರ್ಷಿಕೆಯಡಿ ಬರೆದಿರುವ ಈ ಪತ್ರದಲ್ಲಿ ಕ್ಯಾಲಿಫೋರ್ನಿಯಾದಿಂದ ಭಾರತಕ್ಕೆ ವಾಪಸ್ ಬರುವಾಗ ಆದ ಅನುಭವ, ಇಲ್ಲಿನ ಅಧಿಕಾರಿಗಳು ನೋಡಿಕೊಂಡು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ವಿಮಾನ ಪ್ರಯಾಣದ ವೇಳೆ ಮಾತ್ರ, ಒಂದು ಬದಿಯ ಮೂರು ಸೀಟಿನಲ್ಲಿ ಅಂತರ ಬಿಡದೆ ಮೂವರನ್ನೂ ಕೂರಿಸಿ ಪ್ರಯಾಣಿಸಲು ಅವಕಾಶ ಮಾಡಿದ್ದಕ್ಕೆ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ, ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರತೀ ಹಂತದಲ್ಲಿ ದೇಹದ ಉಷ್ಣತೆಯನ್ನು ಟೆಸ್ಟ್ ಮಾಡಲಾಗಿತ್ತು. ಎಲ್ಲಾ ಕಡೆ ಪರೀಕ್ಷೆ ಪಾಸಾದರೂ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ಜ್ವರ ಬಂದಿತ್ತು. ಕೂಡಲೇ ಆಂಬ್ಯುಲೆನ್ಸ್ ಮೂಲಕ ಕೊರೊನಾ ಟೆಸ್ಟ್ ಗಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆ ತಂದರು.
ಆಂಬ್ಯುಲೆನ್ಸ್ ನಲ್ಲಿ ಕುಳಿತಾಗ ಕೊರೊನಾ ಪಾಸಿಟಿವ್ ಬಂದ್ರೆ ಏನೆಲ್ಲಾ ಆಗಬಹುದು, ಹದಿನಾಲ್ಕು ದಿನ ಸರ್ಕಾರಿ ಆಸ್ಪತ್ರೆಯಲ್ಲಿರಬೇಕಾ, ಸ್ವಚ್ಛತೆ ಇರಬಹುದಾ, ಕುಟುಂಬವನ್ನು ಯಾವಾಗ ಭೇಟಿಯಾಗ್ಬಹುದು ಎಂದೆಲ್ಲಾ ಭಯವಾಗಿತ್ತು. ಆದರೆ ಟೆಸ್ಟಿಂಗ್ ಸೆಂಟರ್ಗೆ ಹೋದ ಕೂಡಲೇ ವ್ಯವಸ್ಥೆ ಹಾಗೂ ಆರೋಗ್ಯಾಧಿಕಾರಿಗಳು ನೋಡಿಕೊಂಡ ಬಗೆ ಅದ್ಭುತ ಅನಿಸಿತು.
ಒಂದು ವಾರ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಆಗಾಗ ಗಂಟಲು ದ್ರವ, ರಕ್ತ ಪರೀಕ್ಷೆ ನಡೆಸಲಾಗುತ್ತಿತ್ತು. ಕೋವಿಡ್-19 ಟೆಸ್ಟ್ ನೆಗೆಟಿವ್ ಬಂದರೂ, ನಿರ್ಲಕ್ಷ್ಯ ವಹಿಸದೆ ಜ್ವರಕ್ಕೆ ಕಾರಣ ಏನು ಎಂದು ಪತ್ತೆಹಚ್ಚುತ್ತಿದ್ದರು. ಅತ್ಯುತ್ತಮ ಚಿಕಿತ್ಸೆ ಹಾಗೂ ಸ್ಪಂದನೆಯಿಂದಾಗಿ ನಾನು ಬೇಗ ಗುಣಮುಖಳಾದೆ. ಮನೆಯಿಂದ ಹೊರಗಿದ್ದರೂ ಮನೆ ರೀತಿಯ ಆಹಾರ ಸಿಕ್ಕಿತು. ಉಚಿತವಾಗಿ ಸಿಕ್ಕಿದ ಆಹಾರ, ಚಿಕಿತ್ಸೆ, ಆಸ್ಪತ್ರೆ ಸ್ವಚ್ಛತೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಧನ್ಯವಾದ ತಿಳಿಸಿದ ಬಿಬಿಎಂಪಿ ಆಯುಕ್ತರು ಅಲ್ಲದೆ ಕೊರೊನಾ ವಾರಿಯರ್ಸ್ ಗೆ ಧನ್ಯವಾದ, ಸರ್ಕಾರದ ಪ್ರಯತ್ನಕ್ಕೆ ಧನ್ಯವಾದ, ಅನವಶ್ಯಕವಾಗಿ ಸರ್ಕಾರದ ಪ್ರಯತ್ನವನ್ನು ಯಾರೂ ಟೀಕಿಸಬೇಡಿ ಎಂದು ಪತ್ರದಲ್ಲಿ ಅಂಕಿತಾ ವರ್ಮ ಬರೆದುಕೊಂಡಿದ್ದಾರೆ. ಈ ಪತ್ರವನ್ನು ಪಾಲಿಕೆ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರಿಗಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಸರ್ಕಾರದ ಪ್ರಯತ್ನವನ್ನು ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.