ಬೆಂಗಳೂರು : ಮತದಾನದ ನಂತರ ನಡೆದ ಕೆಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಬಹುಮತ ಬಂದಿದ್ದರೂ, ಇನ್ನೂ ಕೆಲ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಹಾಗಾಗಿ, ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ.
ಹೀಗಾಗಿ, ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಈಗ ಜೆಡಿಎಸ್ ನಿರ್ಣಾಯಕ ಘಟ್ಟದಲ್ಲಿ ಇದೆ. ಒಂದು ವೇಳೆ ಜೆಡಿಎಸ್ ಕಿಂಗ್ ಮೇಕರ್ ಆದರೂ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮತದಾನ ಮುಗಿದ ಬಳಿಕ ಬಿಡುಗಡೆಯಾದ ಎಕ್ಸಿಟ್ ಪೋಲ್ಗಳು, 2018 ರ ಚುನಾವಣೆಯಲ್ಲಿ ಜೆಡಿಎಸ್ ಕಳೆದ ಬಾರಿ ಪಡೆದ ಸ್ಥಾನ ಈ ಬಾರಿ ಬರುವುದಿಲ್ಲ. ಆದರೆ, ರಾಜ್ಯದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕಿಂಗ್ ಮೇಕರ್ ಆಗಲಿದೆ ಎಂದು ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ಕಿಂಗ್ ಮೇಕರ್ ಆಗುವ ಲಕ್ಷಣಗಳು ಕಾಣುತ್ತಿವೆ.
ಜೆಡಿಎಸ್ ನಾಯಕರಿಂದ ಎಚ್ಚರಿಕೆಯ ಹೆಜ್ಜೆ: ಈ ಸಲ ಚುನಾವಣೆಯಲ್ಲಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಜೆಡಿಎಸ್ ದಂಪತಿಗಳಿಗೆ ಪಕ್ಷದ ಭವಿಷ್ಯದ ಚಿಂತೆ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ಗಿಂತ ಬಿಜೆಪಿ ಸೂಕ್ತ ಎಂಬ ಅನಿಸಿಕೆ ವ್ಯಕ್ತವಾಗಿದೆ. ಒಂದು ವೇಳೆ ಜಾತ್ಯತೀತ ಅಸ್ತ್ರದ ಮೇಲೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೂ ಭವಿಷ್ಯದಲ್ಲಿ 'ಆಪರೇಷನ್' ಖಚಿತ ಎನ್ನುವುದು 2018 ರಲ್ಲಿನ ಘಟನೆಗಳೇ ಸಾಕ್ಷಿಯಾಗಿರುವುದು ಗೊತ್ತಿರುವ ಸಂಗತಿ. ಹಾಗಾಗಿ, ಈ ಬಾರಿ ಜೆಡಿಎಸ್ ನಾಯಕರು ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.