ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಡಿಸೆಂಬರ್ ತಿಂಗಳಲ್ಲಿ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಈ ಮೂಲಕ ಒಟ್ಟೂ ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಹೌದು, ದೊಡ್ಡ ದೊಡ್ಡ ಆನೆಗಳ ನಡುವೆ ಪುಟ್ಟದಾಗಿ ಹೆಜ್ಜೆ ಹಾಕಿ ಎಲ್ಲ ದೈತ್ಯ ಜೀವಿಗಳನ್ನು ಕೆಣಕುತ್ತಿರುವ ಈ ಮರಿ ಆನೆ ಸಫಾರಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಉದ್ಯಾನವನಕ್ಕೆ ಹೊಸ ಹುರುಪು ಕೊಟ್ಟ ಮುದ್ದಾದ ಆನೆ ಮರಿ ಇದು. ತಾಯಿ ರೂಪಾಳನ್ನೂ ಮರೆತು ಚಿಕ್ಕಮ್ಮ ವೇದ, ದೊಡ್ಡಮ್ಮ ರೀಟಾಳ ಬಳಿ ಕೂಡ ಅದು ಆಟವಾಡಿಕೊಂಡಿರುತ್ತದೆ. ಈ ಮರಿಯ ಜನನ ಮಾವುತರಿಗಷ್ಟೇ ಅಲ್ಲದೆ ಕಾವಾಡಿಗರು, ಉದ್ಯಾನವನದ ಸಿಬ್ಬಂದಿಗೂ ಸಂತಸ ಮೂಡಿಸಿದೆ.
ರೂಪಾ ಎಂಬ ಹೆಣ್ಣು ಆನೆಗೆ ಜನಿಸಿದ ಮೂರನೇ ಮರಿಯಾನೆ ಇದಾಗಿದೆ. ಮೊದಲನೆಯದು ಗೌರಿ, ಎರಡನೇಯದು ಬಸವ. ಈ ಪುಟ್ಟ ಆನೆ ಮರಿಯು 120 ಕೆ.ಜಿ ತೂಕ ಹೊಂದಿದ್ದು, ಆರೋಗ್ಯವಾಗಿದೆ. ತನ್ನೆಲ್ಲ ಪರಿವಾರಕ್ಕೆ ಮುದ್ದಿನ ಮರಿಯಾಗಿ ಕೀಟಲೆ ಮಾಡುತ್ತಾ ಬೆಳೆಯುತ್ತಿದೆ. ಕಳೆದ ಡಿಸೆಂಬರ್ 11 ರಂದು ಜನಿಸಿದ ಎಳೆ ಮರಿ ಇದಾಗಿದ್ದು, ತುಂಟಾಟದಲ್ಲಿ ಎತ್ತಿದ ಕೈ. ಉದ್ಯಾನದ ಒಳಗಡೆಯ ಸೀಗೆಕಟ್ಟೆಯ ಆನೆ ನಿರ್ವಹಣಾ ಕೇಂದ್ರದಲ್ಲಿ ಮಾವುತರ ಆರೈಕೆಯೊಂದಿಗೆ ಬೆಳೆಯುತ್ತಿರುವ ಮರಿ ಆನೆಯು ಸಫಾರಿಗರ ಆಕರ್ಷಣೆಯಾಗಿದೆ.