ಬೆಂಗಳೂರು: ಮುನೀಶ್ ಮೌದ್ಗಿಲ್ ಸೇರಿದಂತೆ ಆರು ಮಂದಿ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಗಳನ್ನು ಇಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಮುನೀಶ್ ಮೌದ್ಗಿಲ್ ಅವರನ್ನು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಉಳಿದಂತೆ, ವಿನೋತ್ ಪ್ರಿಯಾ ಆರ್. - ಬಿಬಿಎಂಪಿ, ವಲಯ ಆಯುಕ್ತರು, ದಕ್ಷಿಣ ವಲಯ.
ಕರೀಗೌಡ- ಬಿಬಿಎಂಪಿ ಆಯುಕ್ತರು, ಯಲಹಂಕ ವಲಯ. ಆರ್.ಸ್ನೇಹಲ್- ಬಿಬಿಎಂಪಿ ವಲಯ ಆಯುಕ್ತರು, ಪೂರ್ವ ವಲಯ. ಪ್ರೀತಿ ಗೆಹ್ಲೋಟ್-ಬಿಬಿಎಂಪಿ ವಲಯ ಆಯುಕ್ತರು, ದಾಸರಹಳ್ಳಿ ವಲಯ. ಇಬ್ರಾಹಿಂ ಮೈಗೂರ್-ಬಿಬಿಎಂಪಿ, ವಲಯ ಆಯುಕ್ತರು, ಮಹದೇವಪುರ ವಲಯಕ್ಕೆ ವರ್ಗಾಯಿಸಲಾಗಿದೆ.
ದಕ್ಷ ಅಧಿಕಾರಿಗೆ ಹುದ್ದೆ ಇಲ್ಲ!:ಮಂಗಳೂರಿನಲ್ಲಿ ಕಳೆದ ಐದು ತಿಂಗಳಿನಿಂದ ಮಾದಕ ವಸ್ತು ಎಂಡಿಎಂಎ ವಿರುದ್ಧ ಸಮರ ಸಾರಿ ಡ್ರಗ್ಸ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು. ಆದರೆ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಕಳೆದ ಐದು ತಿಂಗಳ ಅವಧಿಯಲ್ಲಿ ಕುಲದೀಪ್ ಅವರು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ಸ್, ಗಾಂಜಾ, ಎಂಡಿಎಂಎ ಮಾದಕ ದ್ರವ್ಯ ದಂಧೆಕೋರರನ್ನು ಮಟ್ಟಹಾಕಿ ಹಲವರನ್ನು ಜೈಲಿಗೆ ಕಳುಹಿಸಿದ್ದರು. ಕೋಟ್ಯಂತರ ಮೌಲ್ಯದ 1.5 ಕೆ.ಜಿ ಎಂಡಿಎಂಎ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದರು.
ಅದೇ ರೀತಿ ಸಾರಿಗೆ ನಿಯಮ ಮೀರುವವರ ವಿರುದ್ಧವೂ ಕ್ರಮ ಕೈಗೊಂಡಿದ್ದರು. ಮಟ್ಕಾ ದಂಧೆ, ಸೈಬರ್ ಕ್ರೈಂ ವಿರುದ್ಧವೂ ಕ್ರಮ ಜರುಗಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಡ್ರಗ್ಸ್ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಂಗಳೂರು ಖಾಸಗಿ ಬಸ್ಗಳ ನಿಯಮ ಮೀರಿದ ಸಂಚಾರವನ್ನು ಹತೋಟಿಗೆ ತರುವಲ್ಲಿಯೂ ಕೂಡ ಜೈನ್ ಪಾತ್ರ ಪ್ರಮುಖವಾಗಿತ್ತು.
ಇದನ್ನೂಓದಿ:ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧಾರ: ಶಿಕ್ಷಣ ಸಚಿವ ಮಧು ಬಂಗಾರಪ್ಪ