ಕರ್ನಾಟಕ

karnataka

ETV Bharat / state

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ : 31 ಮೀಟರ್ ಉದ್ದದ ಯು-ಗರ್ಡರ್ ಸಿದ್ಧ - ಕಾಸ್ಟಿಂಗ್ ಯಾರ್ಡ್

ಬೆಂಗಳೂರು ಸಬ್​ ಅರ್ಬನ್​ ರೈಲು ಯೋಜನೆಯಲ್ಲಿ 31 ಮೀ ಉದ್ದದ ಯು-ಗರ್ಡರ್​​ ಅನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವ ಎಂ ಬಿ ಪಾಟೀಲ್​ ಹೇಳಿದ್ದಾರೆ.

31-m-long-u-girder-ready-for-bangalore-sub-urban-rail-project
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ : 31 ಮೀ ಉದ್ದದ ಯು-ಗರ್ಡರ್ ಸಿದ್ಧ

By ETV Bharat Karnataka Team

Published : Jan 7, 2024, 9:56 PM IST

ಬೆಂಗಳೂರು :ಮಹತ್ವಾಕಾಂಕ್ಷಿ ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆಯ ಕಾರಿಡಾರ್-2ರಲ್ಲಿ ಅಳವಡಿಸಲಿರುವ, ದಾಖಲೆಯ 31 ಮೀಟರ್​ ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿರುವ ಕಾಮಗಾರಿ ಸ್ಥಾವರದಲ್ಲಿ (ಕಾಸ್ಟಿಂಗ್ ಯಾರ್ಡ್) ಶನಿವಾರ ರಾತ್ರಿ ಸಿದ್ಧಪಡಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ದೇಶದ ಉಳಿದ ಮೆಟ್ರೋಗಳಲ್ಲಿ 28 ಮೀ. ಉದ್ದದ ಗರ್ಡರ್ (ಸಿಮೆಂಟ್ ಮತ್ತು ಕಬ್ಬಿಣದ ತೊಲೆ) ತಯಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಕಾರಿಡಾರ್-2ರಲ್ಲಿ (ಮಲ್ಲಿಗೆ ಲೈನ್) ಅಗತ್ಯವಾಗಿವೆ. ಇದನ್ನು ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ಇಂತಹ ಪ್ರತೀ ಒಂದು ಗರ್ಡರ್ ತಯಾರಿಕೆಗೂ ಎಂ60 ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಇಂತಹ ತೊಲೆಗಳು ತಲಾ 178 ಟನ್ ಭಾರವಿರುತ್ತವೆ. ಇವುಗಳಿಂದ ಕಾಮಗಾರಿಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಿದ್ದು, ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಂತಹ ಯು-ಗರ್ಡರ್ ಸಿದ್ಧಪಡಿಸಿರುವುದು ಒಂದು ತಾಂತ್ರಿಕ ಅದ್ಭುತವಾಗಿದ್ದು, ಸರ್ಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ. ಇಂತಹ ಗರ್ಡರ್ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ :ಬೆಂಗಳೂರು: ಮೆಟ್ರೋ ರೈಲು ಹಳಿಗೆ ಹಾರಿ ಆತಂಕ ಸೃಷ್ಟಿಸಿದ ಯುವಕ

ABOUT THE AUTHOR

...view details