ಬೆಂಗಳೂರು:ಎದೆಹಾಲಿನ ಕೊರತೆಯು ಶಿಶುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ವಿವಿಧ ಕಾರಣಗಳಿಂದಾಗಿ ಶಿಶುಗಳು ಎದೆಹಾಲಿನಿಂದ ವಂಚಿತರಾಗುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಅಂತಹ ಮಕ್ಕಳಲ್ಲಿ ಅಪೌಷ್ಟಿಕತೆ, ಅಶಕ್ತತೆ ಸೇರಿದಂತೆ ಹಲವು ಸಮಸ್ಯೆಗಳು ಕಂಡುಬರುತ್ತವೆ. ಅಕಾಲಿಕವಾಗಿ ಇಲ್ಲದೆ ತೂಕವಿಲ್ಲದ ಮಕ್ಕಳಿಗೂ ಸಹ ತಾಯಿಯ ಎದೆ ಹಾಲು ಅತ್ಯಗತ್ಯ. ಇಂತಹ ಶಿಶುಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡನೇ ಮಿಲ್ಕ್ ಬ್ಯಾಂಕ್ ಸಿದ್ಧವಾಗಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ.
ತಾಯಿಯ ಎದೆಹಾಲಿನಲ್ಲಿ ಪ್ರೊಟೀನ್, ಲವಣಾಂಶ, ಶರ್ಕರಪಿಷ್ಠ, ಫ್ಯಾಟ್ ಮೊದಲಾದ ಪ್ರತಿರೋಧಕ ಹೆಚ್ಚಿಸುವ ಜೀವಕಣಗಳಿರುತ್ತದೆ. ಕಳೆದ ವರ್ಷ ಹ್ಯೂಮನ್ ಮಿಲ್ಕ್ ಬ್ಯಾಂಕ್ ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾರಂಭವಾಗಿತ್ತು. ಅದೇ ಮಾದರಿಯಲ್ಲಿ ಇದೀಗ ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಇನ್ನಷ್ಟು ಸುಸಜ್ಜಿತವಾದ ಮಿಲ್ಕ್ ಬ್ಯಾಂಕ್ ಶಿವಾಜಿನಗರದ ಸರ್ಕಾರಿ ಘೋಷಾ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಡಿ ಕಾರ್ಯನಿರ್ವಹಿಸಲಿರುವ ರಾಜ್ಯದ ಎರಡನೇ ಹಾಲು ಬ್ಯಾಂಕ್ ಇದಾಗಿದೆ. ಪ್ರಾಥಮಿಕ ಪ್ರಯೋಗಗಳು ಮುಗಿದಿದ್ದು, ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿದೆ. ಅಗತ್ಯ ಪ್ರಮಾಣದಲ್ಲಿ ಎದೆಹಾಲು ಸಿಗದ ಹಾಗೂ ವಂಚಿತ ಮಕ್ಕಳಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ.
ಲಕ್ಷಾಂತರ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್: ಈ ಬ್ಯಾಂಕ್ ನಿರ್ಮಾಣಕ್ಕೆ ಸುಮಾರು 24 ಲಕ್ಷ ವೆಚ್ಚ ಮಾಡಲಾಗಿದೆ. ಇದರ ನಿರ್ವಹಣೆಗಾಗಿ ಘೋಷಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರು ವಾಣಿವಿಲಾಸ ಆಸ್ಪತ್ರೆಯಲ್ಲಿ ತರಬೇತಿ ಪಡೆದಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯ ಮಾದರಿಯಲ್ಲಿಯೇ ಬೌರಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತದ ವ್ಯಾಪ್ತಿಯಲ್ಲಿ ಬರುವ ಘೋಷಾ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ನ ಅವಶ್ಯಕತೆಯಿತ್ತು.
''ಘೋಷಾ ಆಸ್ಪತ್ರೆಯಲ್ಲಿಯೂ ಕೂಡ ಹೆರಿಗೆಗಾಗಿ ಸಾಕಷ್ಟು ಮಹಿಳೆಯರು ದಾಖಲಾಗುತ್ತಾರೆ. ಹಲವು ಕಾರಣಗಳಿಂದ ಮಕ್ಕಳ ಅಪೌಷ್ಟಿಕತೆಯ ಕುರಿತು ಸರ್ಕಾರದ ಮತ್ತು ಹಲವು ಸಂಘ ಸಂಸ್ಥೆಗಳ ಗಮನ ಸೆಳೆಯಲಾಗಿತ್ತು. ಇದೀಗ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸ ತಂದಿದೆ'' ಎಂದು ಬೌರಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕ ಹೆಚ್‌ವಿ ಮನೋಜ್ ಕುಮಾರ್ ತಿಳಿಸಿದರು.
ಜುಲೈ 17ರಿಂದ ಕಾರ್ಯಾರಂಭ:''ಸಾಮಾನ್ಯವಾಗಿ ಬೋರಿಂಗ್ ಮತ್ತು ಘೋಷಾ ಆಸ್ಪತ್ರೆಯಲ್ಲಿ ಜನಿಸುವ ಮತ್ತು ದಾಖಲಾಗುವ ಮಕ್ಕಳಿಗೆ ಹಲವು ಸಂದರ್ಭಗಳಲ್ಲಿ ಎದೆ ಹಾಲಿನ ಅವಶ್ಯಕತೆ ಇರುತ್ತದೆ. ನಾನಾ ಕಾರಣಗಳಿಂದ ಮಕ್ಕಳು ಎದೆ ಹಾಲಿನಿಂದ ವಂಚಿತರಾಗಿರುತ್ತಾರೆ. ಇಂತಹ ಮಕ್ಕಳ ಬೆಳವಣಿಗೆ ಮತ್ತು ಚಿಕಿತ್ಸೆಗೆ ಅನುಕೂಲವಾಗಲು ಈ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಯಾರಿಗಳು ಮತ್ತು ಸಿಬ್ಬಂದಿಯ ತರಬೇತಿ ಪೂರ್ಣಗೊಂಡಿದೆ. ಬರುವ ಸೋಮವಾರಜುಲೈ 17ರಿಂದಲೇ ಮಿಲ್ಕ್ ಬ್ಯಾಂಕ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ'' ಎಂದು ವೈದ್ಯರು ಮಾಹಿತಿ ನೀಡಿದರು.