ಬೆಂಗಳೂರು: ವೈಯಕ್ತಿಕ ದ್ವೇಷಕ್ಕೆ ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದ ಹನ್ನೊಂದು ಜನ ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹರೀಶ್, ಮಧು, ಪ್ರಶಾಂತ್ ಸೇರಿ 11 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಡಿಸೆಂಬರ್ 5ರಂದು ರಾತ್ರಿ ಬ್ಯಾಟರಾಯನಪುರದ ಟಿಂಬರ್ ಯಾರ್ಡ್ ಲೇಔಟ್ನಲ್ಲಿ ಅರುಣ್ (24) ಎಂಬಾತನನ್ನು ಹತ್ಯೆಗೈಯ್ಯಲಾಗಿತ್ತು. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಅರುಣ್ ಮನೆ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದಿದ್ದ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ಕಾಲ್ಕಿತ್ತಿದ್ದರು.
ಕೊಲೆಗೆ ಕಾರಣ:ಪ್ರಕರಣದ ಪ್ರಮುಖ ಆರೋಪಿ ಹರೀಶ್ ಈ ಹಿಂದೆ ಒಂದು ಹತ್ಯೆ ಪ್ರಕರಣದಲ್ಲಿ ಬಂಧನವಾಗಲು ಅರುಣ್ ಕಾರಣವಾಗಿದ್ದ. ಅಂದಿನಿಂದಲೂ ಹರೀಶ್ ಮತ್ತು ಅರುಣ್ ನಡುವೆ ವೈಷಮ್ಯವಿತ್ತು. ಇತ್ತೀಚೆಗೆ ಹರೀಶ್ ವಿರೋಧಿಗಳ ಪರವಾಗಿ ಅರುಣ್ ಸಹಾಯ ಮಾಡುತ್ತಿದ್ದ. ಹರೀಶ್ ಮನೆ ಬಳಿ ಓಡಾಡುವುದು, ಆತನ ಬಗ್ಗೆ ವಿಚಾರಿಸುವುದನ್ನು ಮಾಡಲಾರಂಭಿಸಿದ್ದ. ಈ ವಿಚಾರ ತಿಳಿದ ಹರೀಶ್, ಅರುಣ್ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಡಿಸೆಂಬರ್ 5ರಂದು ಟಿಂಬರ್ ಯಾರ್ಡ್ ಲೇಔಟ್ ರಸ್ತೆಯಲ್ಲಿ ಉಳಿದ ಆರೋಪಿಗಳ ಜೊತೆ ಸೇರಿ ಅರುಣ್ನ ಹತ್ಯೆಗೈದಿದ್ದ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಬ್ಯಾಟರಾಯನಪುರ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.