ಬೆಂಗಳೂರು: ರಾಜ್ಯದಲ್ಲಿ ಇಂದು 10 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆ ಆಗಿದೆ. ಒಟ್ಟಾರೆ 17 ಜನ ಮೃತಪಟ್ಟಿದ್ದು, 129 ಜನ ಗುಣಮುಖರಾಗಿದ್ದಾರೆ. ಉಳಿದ ಪ್ರಕರಣಗಳಲ್ಲಿ 272 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು, ಐವರನ್ನ ತೀವ್ರ ನಿಗಾ ಘಟಕಗಳಲ್ಲಿ ಇರಿಸಲಾಗಿದೆ.
ಖಾಸಗಿ ವೈದ್ಯಕೀಯ ವಿವಿಯಲ್ಲೂ ಫೀವರ್ ಕ್ಲಿನಿಕ್ ಸ್ಥಾಪನೆ:
ರಾಜ್ಯದ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿಯೂ ಸಹ ಫೀವರ್ ಕ್ಲಿನಿಕ್ಗಳನ್ನು ಸ್ಥಾಪಿಸುವಂತೆ ಸೂಚಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಲು ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಇದರಿಂದಾಗಿ ತಪಾಸಣೆ ಹಾಗೂ ಚಿಕಿತ್ಸಾ ಪ್ರಕ್ರಿಯೆ ಇನ್ನಷ್ಟು ವ್ಯಾಪಕ ಹಾಗೂ ಸಮಗ್ರಗೊಳ್ಳಲಿದೆ. ಇದರ ಉಸ್ತುವಾರಿ ಆಯಾ ಜಿಲ್ಲಾಧಿಕಾರಿಗಳ ಅಧೀನದಲ್ಲಿರಲಿದೆ. ಇನ್ನು ಫೀವರ್ ಕ್ಲಿನಿಕ್ನಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ.
ಕ್ಲಿನಿಕಲ್ ಸಂಶೋಧನೆ ಕೈಗೆತ್ತಿಕೊಳ್ಳಲು ಅನುಮತಿ:
ಬೆಂಗಳೂರಿನ ವೈದ್ಯ ಡಾ. ವಿಶಾಲ್ ರಾವ್ ಅವರಿಗೆ ಕ್ಲಿನಿಕಲ್ ಸಂಶೋಧನೆ ಕೈಗೆತ್ತಿಕೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಭಾರತ ಸರ್ಕಾರ Directorate of Health services ಕೋವಿಡ್ಗೆ ಸಂಬಂಧಿಸಿದಂತೆ ಕ್ಲಿನಿಕಲ್ ಟ್ರಯಲ್ ಆಫ್ ಪ್ಲಾಸ್ಮಾ ಥೆರೆಪಿಗೆ ಅನುಮತಿ ನೀಡಿರುವುದರ ಹಿನ್ನೆಲೆ ರಾಜ್ಯದ ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳು ಈ ಕುರಿತಂತೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ ನಿರ್ದೇಶನ ಜಾರಿ ಮಾಡಿದೆ.
ಅಲ್ಲದೇ ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ವೈದ್ಯ ಡಾ. ವಿಶಾಲ್ ರಾವ್ ಅವರನ್ನು ಪ್ಲಾಸ್ಮಾ ಥೆರೆಪಿಯ ಕುರಿತಂತೆ ಕ್ಲಿನಿಕಲ್ ಸಂಶೋಧನೆಯನ್ನು ಕೈಗೆತ್ತಿಕೊಳ್ಳಲು ಅನುಮತಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮೃತ ವ್ಯಕ್ತಿಗೂ ಕೋವಿಡ್ಗೂ ಸಂಬಂಧವಿಲ್ಲ:
ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಯಲ್ಲಿ ಮೃತರಾದ ವ್ಯಕ್ತಿಗೂ ಕೋವಿಡ್ಗೆ ಸಂಬಂಧವಿಲ್ಲ. ಬೆಂಗಳೂರಿನ ಗರ್ಭಿಣಿ ಮಹಿಳೆಯೊಬ್ಬರು ಇ.ಎಸ್.ಐ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಬಳಿಕ ಮರಣ ಹೊಂದಿದ್ದಾರೆ.
ಈ ಸಾವಿಗೆ ಕೂಡ ಕೋವಿಡ್ ಕಾರಣವಲ್ಲ, ಇದು ಸತ್ಯಕ್ಕೆ ದೂರವಾದ ಅಂಶ ಎಂದು ಹೆಲ್ತ್ ಬುಲೇಟಿನ್ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಟ್ರಾವೆಲ್ ಹಿಸ್ಟರಿ ಹೀಗಿದೆ: (409-418)
- ರೋಗಿ-409: ಬಂಟ್ವಾಳದ ಮಹಿಳೆಯೊಬ್ಬರಿಗೆ (67 ವರ್ಷ) ಸೋಂಕು ತಗುಲಿದ್ದು, ತೀವ್ರ ಉಸಿರಾಟದ ತೊಂದರೆ ಇರುವುದರಿಂದ ಇಲ್ಲಿಯೇ ಚಿಕಿತ್ಸೆ ಮುಂದುವರೆದಿದೆ.
- ರೋಗಿ-410: ವಿಜಯಪುರದ 18 ವರ್ಷದ ಯುವತಿಗೆ ಸೋಂಕು ತಗುಲಿದ್ದು, P-306ರ ಸಂಪರ್ಕದಿಂದ ಈ ವೈರಸ್ ಹರಡಿದೆ ಎಂದು ಶಂಕಿಸಲಾಗಿದೆ. ಇನ್ನು ವಿಜಯಪುರದಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
- ರೋಗಿ-411: ವಿಜಯಪುರದ 30 ವರ್ಷದ ಮತ್ತೊಬ್ಬ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು, P-306ರ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇವರು ಸಹ ವಿಜಯಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- ರೋಗಿ-412: ಕಲಬುರಗಿಯಲ್ಲಿ 29 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಈತ ILIನಿಂದ ಬಳಲುತ್ತಿದ್ದು, ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ.
- ರೋಗಿ-413: ಕಲಬುರಗಿಯಲ್ಲಿ 61 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಯಾರ ಸಂಪರ್ಕದಿಂದ ವೈರಸ್ ಹರಡಿದೆ ಎನ್ನುವುದು ನಿಗೂಢವಾಗಿದ್ದರಿಂದ ಈ ಬಗ್ಗೆ ವೈದ್ಯರ ತಂಡ ತಲೆಬಿಸಿ ಮಾಡಿಕೊಂಡಿದೆ. ಇವರು ಸಹ ಕಲಬುರಗಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
- ರೋಗಿ-414: ಕಲಬುರಗಿಯ 80 ವರ್ಷದ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಕಲಬುರಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ.
- ರೋಗಿ-415: ವಿಜಯಪುರದ 18 ವರ್ಷದ ಯುವತಿಗೂ ಸೋಂಕು ಕಾಣಿಸಿಕೊಂಡಿದೆ. P-306ರ ಸಂಪರ್ಕದಿಂದ ಸೋಂಕು ತಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
- ರೋಗಿ-416: ನಂಜನಗೂಡು-ಮೈಸೂರಿನಲ್ಲಿ 26 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. P-52ರ ದ್ವಿತೀಯ ಸಂಪರ್ಕದಿಂದ ಸೋಂಕು ತಾಗಿದೆ. ಮೈಸೂರಿನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
- ರೋಗಿ-417: ನಂಜನಗೂಡಿನ ಮತ್ತೋರ್ವ ಯುವಕನಲ್ಲಿ (26 ವರ್ಷ) ಸೋಂಕು ಪತ್ತೆಯಾಗಿದೆ. P-52ರ ದ್ವಿತೀಯ ಸಂಪರ್ಕ ಹೊಂದಿದ್ದಾನೆ ಎನ್ನಲಾಗುತ್ತಿದೆ. ಈತನಿಗೂ ಸಹ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- ರೋಗಿ-418: ಬೆಳಗಾವಿಯ 25 ವರ್ಷದ ಯುವತಿಗೂ ಸಹ ಸೋಂಕು ಕಾಣಿಸಿಕೊಂಡಿದೆ. P-293ರ ದ್ವಿತೀಯ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.