ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ವೀಲ್ಹಿಂಗ್ ಮಾಡುತ್ತ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದ ಹತ್ತು ದ್ವಿಚಕ್ರ ವಾಹನ ಸವಾರರನ್ನು ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬೈಕ್ ವ್ಹೀಲಿಂಗ್ : 10 ದ್ವಿಚಕ್ರ ವಾಹನ ಸವಾರರ ಬಂಧನ
ರಾತ್ರಿ ವೇಳೆ ಬೈಕ್ ವ್ಹೀಲಿಂಗ್ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ 10 ದ್ವಿಚಕ್ರ ವಾಹನ ಸವಾರರನ್ನು ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಪರಮೇಶ್, ಅಜಂ ಪಾಷಾ, ಪ್ರಶಾಂತ್ ಕುಮಾರ್, ಮುಖೇಶ್, ಹೇಮಂತ್, ವಿಶಾಲ್, ಶಾಬದ್ದೀನ್, ಆನಂದ ಕುಮಾರ್, ಸುನೀಲ, ಮಹದೇವ ಮತ್ತು ತಾಜುದ್ದೀನ್ ಬಂಧಿತರು. ಆರೋಪಿಗಳು ರಾತ್ರಿ 10 ಗಂಟೆ ನಂತರ ಏರ್ಪೋರ್ಟ್ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬೈಕ್ ವೀಲ್ಹಿಂಗ್ ವಿರುದ್ದ ದಾಖಲಾಗಿದ್ದ 10 ಪ್ರತ್ಯೇಕ ಪ್ರಕರಣಗಳಲ್ಲಿ ಹತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಪೈಕಿ ನಾಲ್ವರ ಬಳಿ ಚಾಲನಾ ಪರವಾನಗಿ ರದ್ದುಪಡಿಸುವಂತೆ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗಿದೆ. ಇನ್ನುಳಿದ ಆರೋಪಿಗಳ ಚಾಲನಾ ಪರವಾನಗಿ ಪರಿಶೀಲಿಸುತ್ತಿದ್ದೇವೆ. ಈ ಕುರಿತು ತನಿಖೆ ಮುಂದುವರೆದಿದೆ ಎಂದು ಉತ್ತರ ವಿಭಾಗ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.