ಬೆಂಗಳೂರು : 20 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ 1 ಕೋಟಿ ರೂ. ಸಹಾಯಧನವನ್ನು ಈ ಹಿಂದಿನಂತೆ ನೀಡಲಾಗುವುದು. ದೇಸಿ ಹಾಗೂ ಐತಿಹಾಸಿಕ ಕಂಬಳ ಕ್ರೀಡೆಗೆ ಸರ್ಕಾರ ಹೆಚ್ಚಿನ ಸಹಕಾರ ನೀಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಇಂದು ಬೆಂಗಳೂರು ಕಂಬಳ-ನಮ್ಮ ಕಂಬಳದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಎಲ್ಲರೂ ಒಟ್ಟಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದರು.
ಮನುಷ್ಯನ ಬಳಿ ತೆಗೆದುಕೊಂಡು ಹೋಗಲು ಏನೂ ಇಲ್ಲ. ತನ್ನ ಬಳಿ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರ. ಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆ ಆಗುವುದಿಲ್ಲ. ಭೂಮಿ ಉಳದೆ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಅದರಂತೆ ಅರಮನೆ ಮೈದಾನದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಈ ನೆಪದಲ್ಲಿ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ಸದಾನಂದ ಗೌಡರು, ಹ್ಯಾರಿಸ್ ಬೆಂಗಳೂರಿನಲ್ಲಿ ನಾಯಕರಾಗಿ ಬೆಳೆದಿದ್ದಾರೆ.
ಕರ್ನಾಟಕದ ಕರಾವಳಿ ಭಾಗ ಈ ದೇಶದ ದೊಡ್ಡ ಆಸ್ತಿ. ಉದ್ದಿಮೆ, ಶಿಕ್ಷಣ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಮಾಡಿದೆ. ತಮ್ಮ ಸಂಪ್ರದಾಯವನ್ನು ಬೆಂಗಳೂರಿನ ಜನತೆಗೂ ಪರಿಚಯಿಸಲು ಹೊರಟಿರುವ ಅಶೋಕ್ ರೈ ಕೆಲಸ ಶ್ಲಾಘನೀಯ ಎಂದರು.