ದೊಡ್ಡಬಳ್ಳಾಪುರ :ಇಲ್ಲಿನ ಎಪಿಎಂಸಿ ಆವರಣದೊಳಗೆ ಸರಣಿ ಕಳ್ಳತನ ನಡೆದಿದೆ. ಅಂಗಡಿಗಳ ಶಟರ್ ಮುರಿದು ಒಳನುಗ್ಗಿರುವ ಕಳ್ಳರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಅವರಣದಲ್ಲಿನ ಅಂಗಡಿಗಳಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಎಪಿಎಂಸಿಯ ಮುಖ್ಯ ದ್ವಾರದ ಎಡಬದಿಯಲ್ಲಿರುವ ತೆಂಗಿನ ಕಾಯಿ ಅಂಗಡಿಗಳು ಸೇರಿದಂತೆ ಹಲವು ಅಂಗಡಿಗಳಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ಅಂಗಡಿಗಳ ಶಟರ್ ಮುರಿದು ಒಳನುಗ್ಗಿ, ಗಲ್ಲ ಪೆಟ್ಟಿಗೆಯಲ್ಲಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ.
ಕಿರಣ್ ತೆಂಗಿನ ಕಾಯಿ ಅಂಗಡಿ, ಹಣ್ಣಿನ ಅಂಗಡಿ, ರೇಷನ್ ಅಂಗಡಿ, ಗ್ರಂಥಿಗೆ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಎಂ.ಕೆ ಸ್ಟೋರ್ನಲ್ಲಿ 80 ಸಾವಿರ ಮೌಲ್ಯದ ಸಿಗರೇಟ್ಗಳನ್ನು ಕದ್ದೊಯ್ದಿದ್ದಾರೆ.
"ನಮಗೆ ಎಪಿಎಂಸಿಯಿಂದ ಯಾವುದೇ ಸೌಲಭ್ಯವಿಲ್ಲ. ನಾವು ಪ್ರತಿಯೊಂದು ತೆರಿಗೆ, ಬಾಡಿಗೆ ಕಟ್ಟುತ್ತೇವೆ. ಆದರೂ ಏನೂ ಪ್ರಯೋಜವಿಲ್ಲ. ಪೊಲೀಸ್ ಇಲಾಖೆಯು ಸಿಬ್ಬಂದಿಯನ್ನು ನಿಯೋಜನೆ ಮಾಡಿಲ್ಲ, ಮೂರು ದಿನಗಳ ಹಿಂದೆಯೂ ಕಳ್ಳತನ ನಡೆದಿತ್ತು. ಎಪಿಎಂಸಿ ಅವರಣದಲ್ಲಿ ಪೊಲೀಸರ ಗಸ್ತು ಇಲ್ಲದೆ ಇರುವುದರಿಂದ ಕಳ್ಳತನ ನಡೆಯುತ್ತಿವೆ" ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.