ಕರ್ನಾಟಕ

karnataka

ETV Bharat / state

ಬೆಂಗಳೂರು ಗ್ರಾಮಾಂತರ ಜಿಪಂ ಅಧ್ಯಕ್ಷ ಚುನಾವಣೆ: ಕೈ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅವಿರೋಧ ಆಯ್ಕೆ - ಮಾಜಿ ಸಚಿವ ಕೃಷ್ಣ ಬೈರೇಗೌಡ

ಹಿಂದಿನ ಅಧ್ಯಕ್ಷರಾದ ಜಯಮ್ಮ ಲಕ್ಷ್ಮೀನಾರಾಯಣ ಸದಸ್ಯರೊಂದಿಗೆ ವಿಶ್ವಾಸ ಕಳೆದುಕೊಂಡಿದ್ದರು. ಅಧ್ಯಕ್ಷರ ಕಾರ್ಯವೈಖರಿಯಿಂದ ಅಭಿವೃದ್ಧಿ ಕಾರ್ಯ ಕುಂಠಿತವಾದ ಹಿನ್ನೆಲೆ ಹಿಂದಿನ ಅಧ್ಯಕ್ಷರನ್ನು ಪದಚ್ಯುತಿ ಮಾಡಲಾಯಿತು ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

bengaluru-rural-jilla-panchayat-election-news
ಕೈ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅವಿರೋಧ ಆಯ್ಕೆ

By

Published : Nov 20, 2020, 7:31 PM IST

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ವಿ.ಪ್ರಸಾದ್ ಅವಿರೋಧ ಆಯ್ಕೆಯಾಗಿದ್ದು, ಕೈ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಪಟ್ಟ ಸಿಕ್ಕಿದೆ.

ಕೈ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅವಿರೋಧ ಆಯ್ಕೆ

ಬೆಂಗಳೂರು ಗ್ರಾಮಾಂತರ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಸಕೋಟೆ ಸೂಲಿಬೆಲೆ ಕ್ಷೇತ್ರದ ವಿ.ಪ್ರಸಾದ್ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟು 21 ಸದಸ್ಯ ಬಲದ ಪಂಚಾಯತ್​​ನಲ್ಲಿ 17 ಸದಸ್ಯರ ಬೆಂಬಲ ಪಡೆದ ವಿ.ಪ್ರಸಾದ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಮಾಜಿ ಸಚಿವ ಕೃಷ್ಣಬೈರೇಗೌಡ, ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಹೆಬ್ಬಾಳ ಶಾಸಕ ಭೈರತಿ ಸುರೇಶ್ ನೂತನ ಅಧ್ಯಕ್ಷರಿಗೆ ಸಾಥ್ ನೀಡಿದರು.

ಹಿಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಯಮ್ಮ ಲಕ್ಷ್ಮೀನಾರಾಯಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕಾಗಿ ಇಂದು ಚುನಾವಣೆ ನಡೆಯಿತು. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್​​ಸಿಂಗ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವಿ.ಪ್ರಸಾದ್ ಅವಿರೋಧ ಆಯ್ಕೆಯಾದರು.

ಕೈ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅವಿರೋಧ ಆಯ್ಕೆ

ಇದೇ ಸಮಯದಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ಹಿಂದಿನ ಅಧ್ಯಕ್ಷರಾದ ಜಯಮ್ಮ ಲಕ್ಷ್ಮೀನಾರಾಯಣ ಸದಸ್ಯರೊಂದಿಗೆ ವಿಶ್ವಾಸ ಕಳೆದುಕೊಂಡಿದ್ದರು. ಅಧ್ಯಕ್ಷರ ಕಾರ್ಯವೈಖರಿಯಿಂದ ಅಭಿವೃದ್ಧಿ ಕಾರ್ಯ ಕುಂಠಿತವಾದ ಹಿನ್ನೆಲೆ ಹಿಂದಿನ ಅಧ್ಯಕ್ಷರನ್ನು ಪದಚ್ಯುತಿ ಮಾಡಲಾಯಿತು. ನೂತನ ಅಧ್ಯಕ್ಷರಾದ ವಿ.ಪ್ರಸಾದ್ ಅವರಿಗೆ ಅನುಭವ ಇರುವುದರಿಂದ ಇನ್ನುಳಿದ ಐದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಹಿನ್ನೆಲೆ ಹೊಸಕೋಟೆ ತಾಲೂಕಿನವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣಬೈರೇಗೌಡ, ಎರಡು ವರ್ಷಗಳ ಹಿಂದೆಯೇ 10 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನ ಹೊಸಕೋಟೆ ತಾಲೂಕಿಗೆ ನೀಡಬೇಕೆಂದು ತೀರ್ಮಾನಿಸಲಾಯಿತು. ಅದರಂತೆ ಹೊಸಕೋಟೆ ತಾಲೂಕಿನ ವಿ.ಪ್ರಸಾದ್​ಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಶರತ್ ಬಚ್ಚೇಗೌಡರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಚರ್ಚೆ ನಡೆಸಿದ್ದಾರೆ. ಹೊಸಕೋಟೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕಾರ್ಯಕರ್ತರ 5 ಸಭೆ ಮಾಡಲಾಗಿದೆ. ಮುಂದಿನ ತೀರ್ಮಾನ ವರಿಷ್ಠರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ABOUT THE AUTHOR

...view details