ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮಹಿಳೆಯೊಬ್ಬರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಶೌಚಾಲಯಕ್ಕೆ ಹೋಗುವ ಮುನ್ನ ಹೊರಗಿಟ್ಟಿದ್ದ ಡೈಮಂಡ್ ರಿಂಗ್, ಒಂದು ಲಕ್ಷ ಹಣವಿದ್ದ ಬ್ಯಾಗ್ ನಾಪತ್ತೆಯಾಗಿದೆ. ಟರ್ಮಿನಲ್-1ರ ನಿರ್ಗಮನ ಗೇಟ್ ನಂಬರ್ -1 ಸಮೀಪದ ಶೌಚಾಲಯದ ಬಳಿ ಘಟನೆ ನಡೆದಿದೆ. ಕೆಐಎಎಲ್ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ.
ಆಕ್ಟೋಬರ್ 29ರಂದು ಬೆಂಗಳೂರಿನ ಬಸವೇಶ್ವರನಗರದ ನಿವಾಸಿ ಶಾಲು ಅಗರ್ವಾಲ್ ಎಂಬವರು ಬೆಂಗಳೂರಿನಿಂದ ಅಹಮದಾಬಾದ್ಗೆ ಪ್ರಯಾಣಿಸಬೇಕಿತ್ತು. ಬೆಳಿಗ್ಗೆ 7 ಗಂಟೆಗೆ ಏರ್ಪೋರ್ಟ್ಗೆ ಬಂದಿದ್ದ ಅವರು ಸೆಕ್ಯೂರಿಟಿ ಚೆಕ್ ಇನ್ ಆದ ನಂತರ, ನಿರ್ಗಮನ ಗೇಟ್ ನಂಬರ್ 1ರ ಶೌಚಾಲಯಕ್ಕೆ ತೆರಳಿದ್ದರು. ತಮ್ಮ ಬ್ಯಾಗ್ ಅನ್ನು ವಾಶ್‌ರೂಮ್ ಹೊರಗಡೆ ಇಟ್ಟು ಒಳಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ಬ್ಯಾಗ್ ಕಾಣೆಯಾಗಿತ್ತು.
ಬ್ಯಾಗ್‌ನಲ್ಲಿ ಒಂದು ಡೈಮಂಡ್ ರಿಂಗ್, ಒಂದು ಜೊತೆ ಕಿವಿಯೋಲೆ ಮತ್ತು 1 ಲಕ್ಷ ರೂಪಾಯಿ ಹಣ ಕಳವಾಗಿದೆ ಶಾಲು ಅಗರ್ವಾಲ್ ಅವರ ಸ್ನೇಹಿತ ಪ್ರಣವ್ ವಿಠಲ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪಾಸ್‌ಪೋರ್ಟ್ ಕವರ್ನಲ್ಲಿ ಚಿನ್ನ:ಪಾಸ್‌ಪೋರ್ಟ್ ಕವರ್ನಲ್ಲಿ ಚಿನ್ನ ಮರೆಮಾಚಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಮೂವರು ಪ್ರಯಾಣಿಕರು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 86 ಗ್ರಾಂ ತೂಕದ 5 ಲಕ್ಷ ರೂ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿದೆ. ನವೆಂಬರ್ 1ರಂದು ಕೌಲಾಲಂಪುರ್‌ನಿಂದ ಬೆಂಗಳೂರು ಏರ್ಪೋರ್ಟ್ಗೆ ಬಂದ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್ ಕವರ್ನಲ್ಲಿ ಮರೆಮಾಚಿ ಚಿನ್ನದ ಹಾಳೆಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆಸಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಅಕ್ರಮ ಚಿನ್ನ ಸಾಗಣೆ ಯತ್ನ:ಇತ್ತೀಚಿಗೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಧ್ಯಪ್ರದೇಶದ ಇಂದೋರ್ನಿಂದ ವಿಮಾನದಲ್ಲಿ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿ ಸಿಕ್ಕಿಬಿದ್ದಿದ್ದ. ಆರೋಪಿಯಿಂದ 4 ಕೋಟಿ ರೂ. ಮೌಲ್ಯದ 6.5 ಕೆ.ಜಿ ತೂಕದ 7 ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:ಬೆಲ್ಟ್ ಒಳಗೆ ಚಿನ್ನ ಅಡಗಿಸಿಟ್ಟು ಅಕ್ರಮ ಸಾಗಣೆ: ಬೆಂಗಳೂರು ಏರ್ಪೋರ್ಟ್‌ನಲ್ಲಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ವಶ