ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿ ಪರ್ವ ನಡೆಯುತ್ತಿದೆ. ಈಗಾಗಲೇ 198 ಸದಸ್ಯರ ಅಧಿಕಾರ ಅವಧಿಯೂ ಮುಗಿದಿರುವುದರಿಂದ ವಾರ್ಡ್ ಗಳಲ್ಲಿ ಜನಸಾಮಾನ್ಯರ ಕುಂದುಕೊರತೆಗಳನ್ನು, ಮನವಿಗಳನ್ನು ಸ್ವೀಕರಿಸಲು ಸಮಸ್ಯೆಯಾಗಬಾರದೆಂದು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ.
ಇನ್ನು ಮುಂದೆ ವಾರ್ಡ್ ಕಮಿಟಿಗಳಲ್ಲಿ ಪಾಲಿಕೆ ಸದಸ್ಯರ ಬದಲು ಒಬ್ಬರು ನೋಡಲ್ ಅಧಿಕಾರಿ ಅಧ್ಯಕ್ಷರಾಗಲಿದ್ದಾರೆ. ಪ್ರತೀ ವಾರ್ಡ್ ಗೆ ಒಬ್ಬರಂತೆ ಹಿರಿಯ ಅಧಿಕಾರಿಗಳನ್ನು, ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ.
ವಾರ್ಡ್ಗೊಬ್ಬರಂತೆ ನೋಡಲ್ ಅಧಿಕಾರಿ ನೇಮಕ. ನೋಡಲ್ ಅಧಿಕಾರಿಗಳು ತಾವು ವಾಸವಿರುವ ವಾರ್ಡ್ಗೆ ನೋಡಲ್ ಅಧಿಕಾರಿಗಳಾಗಿ ಕೆಲಸ ಮಾಡಲಿದ್ದಾರೆ. ವಸಂತನಗರ ವಾರ್ಡ್ ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಡಲ್ ಅಧಿಕಾರಿಯಾಗಲಿದ್ದಾರೆ. ಇದೇ ರೀತಿ ಎಲ್ಲಾ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ವಲಯದ, ವಾರ್ಡ್ ಗಳ ಚೀಫ್ ಎಂಜಿನಿಯರ್ಸ್, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೋಡಲ್ ಅಧಿಕಾರಿಯಾಗಿ ಗುರುತಿಸಿ, ಪಟ್ಟಿ ನೀಡುವಂತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಒಂದೇ ವಾರ್ಡ್ ನಲ್ಲಿ ಹೆಚ್ಚು ಸಂಖ್ಯೆಯ ಹಿರಿಯ ಅಧಿಕಾರಿಗಳು ವಾಸವಾಗಿದ್ದರೆ, ಸೀನಿಯಾರಿಟಿ ಮೇಲೆ ಆಯ್ಕೆ ಮಾಡಲು ತಿಳಿಸಲಾಗಿದೆ.
ವಾರ್ಡ್ ಕಮಿಟಿಯಲ್ಲಿ ನೋಡಲ್ ಅಧಿಕಾರಿಗಳ ಜೊತೆಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವೂ ಇರಲಿದೆ. ತಿಂಗಳಿಗೆ ಎರಡು ಬಾರಿ ಈ ವಾರ್ಡ್ ಕಮಿಟಿ ಸಭೆ ಸೇರಬೇಕು. ಮೊದಲ ಹಾಗೂ ಮೂರನೇ ಶನಿವಾರ ಸಭೆ ನಡೆಸಬೇಕು. ಜನರಿಗೆ ಸ್ಪಂದನೆ, ರಸ್ತೆ, ರಾಜಕಾಲುವೆ ನಿರ್ವಹಣೆ, ಪಾರ್ಕ್, ಗ್ರೌಂಡ್ ಆದಾಯ ಸಂಗ್ರಹದ ಬಗ್ಗೆ ಗಮನಕೊಡಲು ಕ್ರಮವಹಿಸುವಂತೆ ತಿಳಿಸಲಾಗಿದೆ.
ಬಿಬಿಎಂಪಿಯಲ್ಲಿ ಇಂದು, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ದುಡಿದ ಐಪಿಡಿ ಸಾಲಪ್ಪ ಅವರ 24 ನೇ ಪುಣ್ಯಸ್ಮರಣೆ ನಡೆಸಲಾಯಿತು. ಬಳಿಕ ಮಾತನಾಡಿದ, ಆಡಳಿತಾಧಿಕಾರಿ ಗೌರವ್ ಗುಪ್ತಾ, ವಾರ್ಡ್ ಕಮಿಟಿಗಳನ್ನು ಪುನಶ್ಚೇತನ ಮಾಡುವ ಬಗ್ಗೆ, ಜನರಿಗೆ ಸ್ಪಂದನಾಶೀಲ ಆಡಳಿತ ಕೊಡುವ ಬಗ್ಗೆ ನಿನ್ನೆಯೇ ಬಿಬಿಎಂಪಿ ಆಯುಕ್ತರ ಜೊತೆ ಚರ್ಚೆ ನಡೆದಿದೆ. ಈಗಾಗಲೇ ಒಂದು ಸುತ್ತೋಲೆ ಹೊರಡಿಸಲಾಗಿದೆ ಎಂದರು ತಿಳಿಸಿದರು.
ಬಳಿಕ ಮಾತನಾಡಿದ ಅವರು, ಐಪಿಡಿ ಸಾಲಪ್ಪ ಅವರು, ರಾಷ್ಟ್ರಮಟ್ಟದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದರು. 1994 ರಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪೌರಕಾರ್ಮಿಕರಿಗಾಗಿ ಅವರು ಬಹಳ ದುಡಿದಿದ್ದಾರೆ ಎಂದರು.
ಮಳೆ ಪರಿಸ್ಥಿತಿ ನಿಭಾಯಿಸಲು, ಬಿಬಿಎಂಪಿಯಲ್ಲಿರುವ ಕಂಟ್ರೋಲ್ ರೂಂ, ವಿಶೇಷ ಆಯುಕ್ತರು, ಜಂಟಿ ಆಯುಕ್ತರು ಮಳೆ ಸವಾಲು ಎದುರಿಸುವುದಕ್ಕೆ ಸಿದ್ಧರಿದ್ದಾರೆ. ನಾನೂ ಕೂಡಾ ಎರಡು ಮೂರು ದಿನದ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದ ಅವರು, ಎಲ್ಲೆಲ್ಲಿ ಮಳೆ ನೀರು ಸಂಗ್ರಹ ಆಗುತ್ತೆ ಅದನ್ನು ಪಂಪ್ ಮೂಲಕ ತೆರವು ಮಾಡುವುದು, ರಾಜಕಾಲುವೆಗಳ ನಿರ್ವಹಣೆ, ಒತ್ತುವರಿ ತೆರವು ಮಾಡಲು ಸೂಚಿಸಲಾಗಿದೆ. ಯಾವ ಕ್ಷೇತ್ರದಲ್ಲಿ ಜನರಿಗೆ ಏನು ಅಗತ್ಯ ಇದೆ, ಅದನ್ನು ಪೂರೈಸಲು ಅಧಿಕಾರಿಗಳು ಸಿದ್ಧವಾಗಿದ್ದಾರೆ ಎಂದರು.