ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಬೈಲುನರಸಾಪುರ ಗ್ರಾಮದಲ್ಲಿನ ನೂರಾರು ಕಾರ್ಯಕರ್ತರು ಶರತ್ ಬಚ್ಚೇಗೌಡರ ಸ್ವಾಭಿಮಾನ ಪಕ್ಷ ತೊರೆದು ಬಿಜೆಪಿಗೆ ಇಂದು ಸೇರ್ಪಡೆಗೊಂಡರು.
ಶರತ್ ಬಚ್ಚೇಗೌಡರ ಪಕ್ಷ ತೊರೆದು ಬಿಜೆಪಿ ಸೇರಿದ ನೂರಾರು ಕಾರ್ಯಕರ್ತರು - ಶರತ್ ಬಚ್ಚೇಗೌಡರ ಪಕ್ಷ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು
ಹೊಸಕೋಟೆ ಕ್ಷೇತ್ರದ ಬೈಲುನರಸಾಪುರ ಗ್ರಾಮದ ನೂರಾರು ಸ್ವಾಭಿಮಾನ ಪಕ್ಷದ ಕಾರ್ಯಕರ್ತರು, ಪಕ್ಷ ತೊರೆದು ಎಂಟಿಬಿ ನಾಗರಾಜ್ಗೆ ಬೆಂಬಲಿಸುವುದಾಗಿ ಹೇಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್, ನಂತರ ಮಾತನಾಡಿ, ನಾನು ಮೂರು ಭಾರಿ ಶಾಸಕನಾಗಿ, ಒಂದು ಬಾರಿ ವಸತಿ ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದ ಕಾರಣ, ಅಧಿಕಾರಕ್ಕೆ ಅಂಟಿಕೊಂಡು ಕೂರದೇ, ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಗೊಂಡೆ. ಆದರೆ, ಕೆಲವರು ಹಣದ ಆಸೆಗಾಗಿ ಬಿಜೆಪಿ ಸೇರಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವರು ದಾನ ಮಾಡುವಷ್ಟು ಸಂಪತ್ತನ್ನು ನನಗೆ ಕರುಣಿಸಿದ್ದಾನೆ. ರಾಜಕಾರಣದಲ್ಲಿ ಹಣ ಮಾಡುವ ಪ್ರಮೇಯ ನನಗಿಲ್ಲ, ತಾಲೂಕಿನಲ್ಲಿ ನನ್ನ ಅಭಿವೃದ್ಧಿಯನ್ನು ಮೆಚ್ಚಿ ಸ್ವಾಭಿಮಾನಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ, ಹೈಕಮಾಂಡ್‌ಗೆ ಸಚಿವರ ಪಟ್ಟಿ ಕಳುಹಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸ್ಥಾನ ನೀಡಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಸಂಪುಟ ಪುನರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಎಂಬುದು ತಿಳಿಯಲಿದೆ ಎಂದರು.