ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) : ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಯುವತಿ ಆತಂಕದ ವಾತಾವರಣ ಸೃಷ್ಟಿಸಿರುವ ಘಟನೆ ನಡೆದಿದೆ. ಮಾರ್ಚ್ 5ರಂದು ರಾತ್ರಿ 9:50ಕ್ಕೆ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂಡಿಗೋ 6E716 ವಿಮಾನದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಇಂಡಿಗೋ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಅರ್ಧ ಗಂಟೆ ಮೊದಲು ಯುವತಿ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದಾರೆ. ಶೌಚಾಲಯದ ಬಾಗಿಲನ್ನು ತೆಗೆದು ಪರಿಶೀಲಿಸಿದಾಗ ಇಲ್ಲಿನ ಡಸ್ಟ್ ಬಿನ್ ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿದೆ. ಸಿಗರೇಟ್ ಕಂಡ ತಕ್ಷಣ ವಿಮಾನದ ಸಿಬ್ಬಂದಿ ಡಸ್ಟ್ ಬಿನ್ ಗೆ ನೀರು ಸುರಿದಿದ್ದಾರೆ. ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಆದ ಕೂಡಲೇ ಆರೋಪಿ ಯುವತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಯುವತಿ ವಿರುದ್ಧ ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಪ್ರಕರಣದಡಿ ಕೇಸು ದಾಖಲಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಸ್ಪೈಸ್ ಜೆಟ್ ವಿಮಾನದಲ್ಲಿ ಸಿಗರೇಟ್ ಸೇದಿದ್ದ ಪ್ರಯಾಣಿಕ : ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಪ್ರಯಾಣಿಕನೋರ್ವ ರಾಜಾರೋಷವಾಗಿ ಸಿಗರೇಟ್ ಸೇದುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಯುವಕನೋರ್ವ ವಿಮಾನದ ಸೀಟಿನಲ್ಲಿ ಮಲಗಿ ಕಾಲಿನ ಮೇಲೆ ಕಾಲು ಹಾಕಿಕೊಂಡು ರಾಜಾರೋಷವಾಗಿ ಸಿಗರೇಟ್ ಸೇದಿರುವುದು ಕಂಡುಬಂದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಈ ಘಟನೆ ದುಬೈನಿಂದ ದೆಹಲಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿತ್ತು. ಈ ಸಂಬಂಧ ಪೊಲೀಸರು ಬಲವಂತ್ ಕಟಾರಿಯಾ ಅಲಿಯಾಸ್ ಬಾಬಿ ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಸಾಮಾನ್ಯವಾಗಿ ವಿಮಾನಯಾನ ಮಾಡುವವರು ಯಾವುದೇ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಒಯ್ಯುವಂತಿಲ್ಲ. ಈ ಬಗ್ಗೆ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಸಂಪೂರ್ಣ ತಪಾಸಣೆ ನಡೆಸುತ್ತಾರೆ. ಆದರೂ ಈ ಯುವಕನಿಗೆ ಈ ಸಿಗರೇಟ್ ಸೇದಲು ಅವಕಾಶ ಹೇಗೆ ಸಿಕ್ಕಿತ್ತು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ, ಭದ್ರತಾ ಲೋಪದ ಕುರಿತು ಮತ್ತು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಸ್ಪೈಸ್ಜೆಟ್ ಸಂಸ್ಥೆಯ ಕಾನೂನು ಮತ್ತು ವ್ಯವಹಾರ ವಿಭಾಗದ ವ್ಯವಸ್ಥಾಪಕ ಜಸ್ಬೀರ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದರು. 2022ರ ಜನವರಿ ತಿಂಗಳಲ್ಲಿ ದುಬೈಯಿಂದ ದೆಹಲಿಯಿಂದ ಬರುತ್ತಿದ್ದ ಎಸ್ಜಿ 706 ವಿಮಾನದಲ್ಲಿ ಲೈಟರ್ ಬಳಸಿ ಈತ ಸಿಗರೇಟ್ ಸೇದಿದ್ದ. ನಂತರ ಇದರ ವಿಡಿಯೋ ಮತ್ತು ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ :ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!