ಬಾಗಲಕೋಟೆ:ಬಾದಾಮಿ ತಾಲೂಕಿನಾದ್ಯಂತ ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಬಾಗಲಕೋಟೆಯಲ್ಲಿ ಮುಂಗಾರಿನ ಅಬ್ಬರಕ್ಕೆ ಇಬ್ಬರು ಬಲಿ ಬಾದಾಮಿ ತಾಲೂಕಿನ ಹೊಸೂರ ಗ್ರಾಮದ ಮಹಿಳೆ ಶಾಂತವ್ವ ಅಣ್ಣಪ್ಪ ಭೋವಿ ಮೃತ ದುರ್ದೈವಿ. ಈಕೆ ಹೊಲದಿಂದ ಮನೆಗೆ ಬರುವ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇನ್ನೊಂದೆಡೆ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಬಸಯ್ಯ ಮುಚಖಂಡಿ ಎಂಬ ವ್ಯಕ್ತಿಯು ಹೊಲದಿಂದ ಮನೆಗೆ ಬರುವ ಸಮಯದಲ್ಲಿ ಮರದ ಕೆಳಗೆ ನಿಂತ ಸಮಯದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ.
ಒಂದೇ ತಾಲೂಕಿನ ಎರಡು ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ತಹಶೀಲ್ದಾರ ಸುಹಾಸ ಇಂಗಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾದಾಮಿ ಪಟ್ಟಣದ ಎಪಿಎಂಸಿ ಬಳಿ ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದಾಗಿ ರೈತಾಪಿ ವರ್ಗದವರಲ್ಲಿ ಸಂತಸ ಮೂಡಿದೆ. ಆದರೆ, ಮುಂಗಾರಿನ ಪ್ರಾರಂಭದ ಮುನ್ನವೇ ಮಳೆ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಬಿಸಿಲಿನ ತಾಪ ಏರುತ್ತಲೇ ಇದೆ. ಆದರೆ ಈ ಮಳೆ ಕೇವಲ ಬಾದಾಮಿ ತಾಲೂಕಿಗೆ ಮಾತ್ರ ಸೀಮಿತವಾಗಿದ್ದು, ಬಾಗಲಕೋಟೆಗೆ ಮಳೆ ಬೀಳದೆ ಜನರು ಬಿಸಿಲಿನ ತಾಪದಿಂದ ತೊಂದರೆಗೆ ಸಿಲುಕಿದ್ದಾರೆ.