ಬಾಗಲಕೋಟೆ: ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಕ್ಕೆ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಬಿ ಎಲ್ ಸಂತೋಷ್ ಅವರು ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದ್ದಾರೆ. ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬಿ ಎಲ್ ಸಂತೋಷ್ ಅವರ ವರ್ತನೆಗೆ ಕರ್ನಾಟಕದಲ್ಲಿರುವ ಲಿಂಗಾಯತ ನಾಯಕರು ಸಿಡಿದ್ದೇದಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ನೋಡುತ್ತಿರುವ ಸಂತೋಷ್ ತಮ್ಮ ಪಕ್ಷ ಸರಿ ಮಾಡಿಕೊಳ್ಳಲಿ. ಲಿಂಗಾಯತ ನಾಯಕರು ಪಕ್ಷ ಬಿಟ್ಟು ಹೊರಟಿದ್ದಾರೆ ಮೊದಲು ಅದು ಸರಿ ಮಾಡಿಕೋಳ್ಳಿ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ, ಎಲ್ಲ ಜಾತಿಯರನ್ನ ಒಗ್ಗೂಡಿಸಿ, ಕೇವಲ ಒಂದೇ ಜಾತಿಯವರನ್ನ ಸಿಮೀತ ಮಾಡಬೇಡಿ, ಎಲ್ಲ ಸಮಾಜದವರೊಟ್ಟಿಗೆ ನಡೆಯಿರಿ. ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆ. ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯ ಮಾಡಿರುವುದಕ್ಕೆ ಬಿಜೆಪಿಯನ್ನು ಜನರು ಮನೆಗೆ ಕಳಿಸಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಹೋಗುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಪಕ್ಷದ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತಮ್ಮ ಕೆಲಸ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೇ ಬಿಜೆಪಿ ಪಕ್ಷದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಬರುವವರು ಇದ್ದಾರೆ. ಎಷ್ಟು ಜನ ಬರುತ್ತಾರೆ ಎಂದು ಸಂತೋಷ ಅವರಿಗೆ ದೂರವಾಣಿ ಮೂಲಕ ತಿಳಿಸುತ್ತೇನೆ ಎಂದು ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದರು.