ಬಾಗಲಕೋಟೆ: ಲಾಕ್ಡೌನ್ ಸಡಿಲಿಕೆ ಇದ್ದರೂ ಸಹ ಜಿಲ್ಲಾಡಳಿತ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಮಾರುಕಟ್ಟೆ ತೆರೆಯುವುದಕ್ಕೆ ಅವಕಾಶ ನೀಡಿದ್ದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ರಾಜ್ಯದಲ್ಲಿ ಒಂದು ರೂಲ್ಸ್, ಬಾಗಲಕೋಟೆಯಲ್ಲಿ ಇನ್ನೊಂದು ರೂಲ್ಸ್: ಏನಿದು ಸಮಸ್ಯೆ?
ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಇದ್ದರೂ ಸಹ ಬೆಳಗ್ಗೆಯಿಂದ ಸಂಜೆಯವರೆಗೂ ಮಾರುಕಟ್ಟೆ ತೆರೆಯಲು ಅವಕಾಶ ನೀಡಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾರ್ವಜನಿಕರು 6 ಗಂಟೆಯವರೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಮಾರುಕಟ್ಟೆಯನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆಯುವಂತೆ ಸರ್ಕಾರ ಆದೇಶ ನೀಡಿದೆ. ಆದರೆ ಜಿಲ್ಲೆಯಲ್ಲಿನ ಈ ನಿಯಮ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ಬೆಳಗ್ಗೆ ಅಂಗಡಿ ತೆರೆದರು ಜನ ಹತ್ತು ಗಂಟೆಯ ನಂತರ ಮಾರುಕಟ್ಟೆಗೆ ಬರುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಬಸವೇಶ್ವರ ವೃತ್ತದ ಬಳಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಒಂದೆಡೆ ಜನಸಂದಣಿ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರವಿಲ್ಲದಿರುವುದು ಅಪಾಯಕ್ಕೆ ದಾರಿ ಮಾಡಿ ಕೊಟ್ಟಂತಾಗಿದೆ.
ರಾಜ್ಯದಲ್ಲಿ ಸಂಜೆಯವರೆಗೆ ಅಂಗಡಿ ಮುಂಗಟ್ಟು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಮಾತ್ರ ಮಧ್ಯಾಹ್ನದವರೆಗೆ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ನಗರದಲ್ಲಿಯೂ ಸಂಜೆಯವರೆಗೂ ಮಾರುಕಟ್ಟೆ ತೆರೆಯಲು ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.