ಬಾಗಲಕೋಟೆ :ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಣಬೆ ಕೃಷಿ ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮ ನಡೆಯಿತು.
ಸೂಕ್ಷ್ಮಾಣುಜೀವಿ ವಿಭಾಗದ ಮುಖ್ಯಸ್ಥರು ಮತ್ತು ಗ್ರಂಥಪಾಲಕರಾದ ಡಾ. ಛಾಯಾ ಪಾಟೀಲ ಮಾತನಾಡಿ, ಪೌಷ್ಟಿಕ ಹಾಗೂ ಆರ್ಥಿಕ ಸುಭದ್ರತೆಗಾಗಿ ಅಣಬೆ ಕೃಷಿ ಮಾಡುವುದು ಅಗತ್ಯವಿದೆ. ಅಣಬೆ ಬೆಳೆ ಶ್ರೀಮಂತರಷ್ಟೇ ತಿನ್ನುವ ಆಹಾರವಲ್ಲ. ಪ್ರತಿಯೊಬ್ಬರೂ ತಿನ್ನಬಹುದಾದ ಸಸ್ಯಹಾರ. ಇದನ್ನು ಮನೆಯ ಅಂಗಳದಲ್ಲಿಯೇ ಕಡಿಮೆ ವೆಚ್ಚದಲ್ಲಿ ಬೆಳೆದು ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚಾಗಿ ಬೆಳೆದದ್ದನ್ನು ಮಾರಿ ಆರ್ಥಿಕ ಲಾಭ ಪಡೆಯಬೇಕು ಹಾಗೂ ಸಮಾಜದ ಆರೋಗ್ಯ ಕಾಪಾಡುವಲ್ಲಿ ರೈತರು ಯೋಜನೆ ರೂಪಿಸಬೇಕು. ಅಣಬೆಯನ್ನು ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿಕೊಂಡು ಗಾಳಿ-ಬೆಳಕು ಹಾಗೂ ಆರ್ದ್ರತೆಯನ್ನು ಕಾಪಾಡಿ ಬೆಳೆಯಬಹುದು. ಕರ್ನಾಟಕ ಸರ್ಕಾರದ ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿಯಲ್ಲಿ ಅಣಬೆ ಕೊಠಡಿ ನಿರ್ಮಾಣ ಮಾಡಲು ಸಹಾಯಧನ ಲಭ್ಯವಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಸಾಕಷ್ಟು ರೈತರು ಪಾಲ್ಗೊಂಡು ಈ ಕೃಷಿಯ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ವಿಜ್ಞಾನಿಗಳೊಂದಿಗೆ ಸಂವಾದವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಛಾಯಾ ಪಾಟೀಲ, ಸಂಯೋಜಕರಾಗಿ ಡಾ. ವಿಜಯ ಮಹಾಂತೇಶ ಭಾಗವಹಿಸಿದ್ದರು ಮತ್ತು ಡಾ. ಗಿರೀಶ ಗಂಜಿಹಾಳ ತಾಂತ್ರಿಕ ನೆರವು ನೀಡಿದರು.