ಬಾಗಲಕೋಟೆ: ಪ್ರಭಾತ ನಗರ ಕಾಲೊನಿಯಲ್ಲಿನ ಸಾರ್ವಜನಿಕ ಉದ್ಯಾನಕ್ಕೆ ನಗರಸಭೆಯ ಹಿರಿಯ ನಿವೃತ್ತ ಅಧಿಕಾರಿ ಎಸ್ಎಸ್ ಜಯಧರ್ ಬೀಗ ಜಡಿದು ತನ್ನ ಮನೆಯ ಆಸ್ತಿಯಂತೆ ಬಳಕೆ ಮಾಡಿಕೊಳ್ಳುತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಪ್ರಭಾತ ನಗರದಲ್ಲಿನ ನಗರಸಭೆಯ ಉದ್ಯಾನದಲ್ಲಿ ಇಂಟರ್ ಲಾಕಿಂಗ್ ಫೆವರ್ ಮತ್ತು ಚಿಕ್ಕಮಕ್ಕಳ ಆಡುವ ಸಾಮಗ್ರಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಹಿಂದೆ 4 ಲಕ್ಷ ರೂ.ಗಳಲ್ಲಿ ಟೆಂಡರ್ ಆಗಿತ್ತು. ಆದರೆ, ಇಲ್ಲಿನ ಉದ್ಯಾನದಲ್ಲಿ ಇಂಟರ್ ಲಾಕಿಂಗ್ ಬ್ರಿಕ್ಸ್ಗಳನ್ನು ಮಾತ್ರ ಅಳವಡಿಸಲಾಗಿದೆ. ಆದರೆ, ಚಿಕ್ಕಮಕ್ಕಳ ಆಡುವ ಸಾಮಗ್ರಿಗಳನ್ನು ಅಳವಡಿಸಿಲ್ಲ.
ಈ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಆದರೆ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ನಗರಸಭೆಯ ನಿವೃತ್ತ ಅಧಿಕಾರಿ ಎಸ್ಎಸ್ ಜಯಧರ್ ಅವರು ಕಾಲೊನಿ ಜನರ ಮೇಲೆ ಪ್ರಭಾವ ಬೀರಿ ಉದ್ಯಾನಕ್ಕೆ ಯಾರೂ ಕೂಡ ಬಾರದಂತೆ ಕಿಲಿ ಜಡಿದು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದರಿಂದ ಅಲ್ಲಿನ ನಿವಾಸಿಗಳು ವಾಯುವಿಹಾರಕ್ಕಾಗಿ ಬೇರೆ ಉದ್ಯಾನಕ್ಕೆ ಹೋಗುವಂತಾಗಿದೆ.