ಬಾಗಲಕೋಟೆ: ಸುಪ್ರೀಂಕೋರ್ಟ್ ಆದೇಶವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಮಾಜಿ ಸಿಎಂ ಸಿದ್ದರಾಮಯ್ಯ ದಡ್ಡರಾಗಿಬಿಟ್ಟರಾ?. ಕಾಂಗ್ರೆಸ್ ಪಕ್ಷ ಸಂಪೂರ್ಣ ಜಾತಿವಾದಿಯಾಗಿದೆ. ಜಾತಿವಾದಿ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡಬೇಕು. ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿವೆ. ಕ್ರಾಂತಿಕಾರಿ ಬದಲಾವಣೆ ತರುವುದಕ್ಕೆ ನಮ್ಮ ಪಕ್ಷ ಹೊರಟಿದೆ. ಭಾರತೀಯ ಸಂಸ್ಕೃತಿಯನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಮುಸ್ಲಿಂ ಸಮಾಜಕ್ಕೆ ಶೇ 4ರಷ್ಟು ಮೀಸಲಾತಿ ರದ್ಧತಿಗೆ ಸುಪ್ರೀಂ ತಡೆ ವಿಚಾರವಾಗಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶವನ್ನ ಅರ್ಥ ಮಾಡಿಕೊಳ್ಳಲಾಗದಷ್ಟು ಸಿದ್ದರಾಮಯ್ಯ ದಡ್ಡರಾ? ಎಂದು ವ್ಯಂಗ್ಯವಾಡಿದರು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದೇಶ ಕೊಟ್ಟಿಲ್ಲ. ನಾವು ಸುಪ್ರೀಂ ಕೋರ್ಟ್ನಲ್ಲಿ ಹೋರಾಡ್ತೇವೆ, ಸಿದ್ದರಾಮಯ್ಯ ಇಂದಲ್ಲ ನಾಳೆ ಜೈಲಿಗೆ ಹೋಗುತ್ತಾರೆ. ಅರ್ಕಾವತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗುತ್ತಾರೆ. ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.
ಸಿಎಂ ಸೀಟ್ಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಜಾತಿವಾದಿ ಪಕ್ಷವಾಗಿದೆ. ಕಾಂಗ್ರೆಸ್ನವರು ನಮ್ಮನ್ನು ಅಧಿಕಾರಕ್ಕೆ ತನ್ನಿ ಅಂತಾರೆ. ಆದರೆ, ಇವರು ಅಧಿಕಾರಕ್ಕೆ ಬಂದರೆ ಈ ಪಿಎಫ್ಐ ನಿಷೇಧ, ಗೋಹತ್ಯೆ ನಿಷೇಧ ಮೊದಲಾದ ಕಾಯ್ದೆಗಳನ್ನು ವಾಪಸ್ ಜಾರಿ ಮಾಡ್ತಾರೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಸೋತರೂ ಬುದ್ಧಿ ಬರಲಿಲ್ಲ" ಎಂದರು.