ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆದ್ದಿರುವುದರ ಅರ್ಥ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಾದಾಮಿ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾ.ಪಂ ಚುನಾವಣೆಗೆ ಇನ್ನೂ ಎಣಿಕೆಯೇ ಮುಗಿದಿರಲಿಲ್ಲ. ಆಗಲೇ 60ರಷ್ಟು ಗ್ರಾ.ಪಂ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಸುಳ್ಳು ಹೇಳಬಾರದು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದರೆ ಪಾರ್ಲಿಮೆಂಟ್ ಸುಲಭವಾಗಿ ಗೆಲ್ಲಬಹುದು. ಅಧ್ಯಕ್ಷರಾದವರು ಪಂಚಾಯಿತಿ ಯಜಮಾನರಾಗಬೇಕು. ಪಿಡಿಒ ಹಿಂದೆ ಹೋಗ್ಬೇಡಿ. ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ ಎಂದು ಕಿವಿಮಾತು ಹೇಳಿದರು.