ಬಾಗಲಕೋಟೆ :ಆಸ್ತಿ ವಿಚಾರಕ್ಕಾಗಿ ಕಲಹ ಉಂಟಾಗಿ, ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಯಲ್ಲವ್ವ ಭುಜಂಗ (48) ಹಾಗೂ ಬೌರವ್ವ ಭುಜಂಗ (45) ಕೊಲೆಯಾದ ದುರ್ದೈವಿಗಳು. ಸಹೋದರ ಅತ್ತಿ ಮಗ ಕಟ್ಟಿಗೆ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಇದೆ.
ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಮದುವೆಯಾದರೂ ತವರು ಮನೆಯಲ್ಲಿ ವಾಸವಿದ್ದ ಇಬ್ಬರು ಮಹಿಳೆಯರು, ನಿತ್ಯ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಕೊಲೆಗೆ ಆಸ್ತಿಯ ವಿಚಾರವೋ ಅಥವಾ ಅನೈತಿಕ ಸಂಬಂಧವೇ ಎಂಬುದು ಪೊಲೀಸರು ತನಿಖೆ ನಡೆಸಬೇಕಾಗಿದೆ.
ಹಲಗೆ ಬಾರಿಸುವ ವಿಚಾರವಾಗಿ ಗಲಾಟೆ; ಯುವಕನಿಗೆ ಚೂರಿ ಇರಿದು ಕೊಲೆ: ಇನ್ನೊಂದೆಡೆ ಹೋಳಿ ಹಬ್ಬದ ಸಂದರ್ಭದಲ್ಲಿ ಹಲಗೆ ಬಾರಿಸುವ ವಿಚಾರವಾಗಿ ಗಲಾಟೆ ನಡೆದು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ಮುಧೋಳ ನಗರದ ಟೀಚರ್ಸ್ ಕಾಲೋನಿಯಲ್ಲಿ ಮಾರ್ಚ್ (8 ) ರಂದು ನಡೆದಿದೆ. ಮೃತ ಯುವಕನನ್ನು ಗಿರೀಶ್ ಪಾಲೋಜಿ (22) ಎಂದು ಗುರುತಿಸಲಾಗಿದೆ. ಈ ಸಂಬಂಧ ಓರ್ವ ಅಪ್ರಾಪ್ತ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಸುಚಿತ್ ಬಂಡಿವಡ್ಡರ್, ಕಾರ್ತಿಕ್ ಮಳಗಾವಿ ಎಂದು ಗುರುತಿಸಲಾಗಿದೆ.