ಬಾಗಲಕೋಟೆ: ಮಹಾಮಾರಿ ಕೊರೊನಾ ಭಯದ ನಂತರ ಈಗ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ರೋಗದ ಬಗ್ಗೆ ಆತಂಕ ಮೂಡಿದೆ. ಈ ರೋಗದಿಂದ ಮಹಾರಾಷ್ಟ್ರ ರಾಜ್ಯದಲ್ಲಿ ನೂರಾರು ಜನರು ಮೃತಪಟ್ಟಿರುವುದು ವರದಿಯಾಗಿದೆ. ಈಗ ಬಾಗಲಕೋಟೆ ಜಿಲ್ಲೆಗೂ ವಕ್ಕರಿಸಿದ ಹಿನ್ನೆಲೆ ಆತಂಕ ಪಡುವಂತಾಗಿದೆ.
ಜಿಲ್ಲೆಯಲ್ಲಿ ಇಬ್ಬರು ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಂಡು ಬಂದಿದೆ. ಕೊರೊನಾ ರೋಗ ಸೋಂಕಿತರಿಗೆ ಆಕ್ಸಿಜನ್ ನೀಡುವ ಸಮಯದಲ್ಲಿ ಬರುವ ಈ ಬ್ಲಾಕ್ ಫಂಗಸ್ ಅತ್ಯಂತ ಆತಂಕಕಾರಿಯಾಗಿದೆ. ಈ ಹಿನ್ನೆಲೆ ಜಿಲ್ಲೆಯ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬ್ಲಾಕ್ ಫಂಗಸ್ ರೋಗದ ಭೀತಿ - ಡಿಸಿ, ಡಿಹೆಚ್ಒ ಪ್ರತಿಕ್ರಿಯೆ ಬೀಳಗಿ ಮತ್ತು ಬಾಗಲಕೋಟೆಯಲ್ಲಿ ಬ್ಲಾಕ್ ಫಂಗಸ್ನಿಂದ ರೋಗಿಗಳು ಬಳಲುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಆತಂಕಕಾರಿಯಾಗಿದೆ. ಜಿಲ್ಲೆಯ ಇಬ್ಬರು ರೋಗಿಗಳಿಗೆ ಬ್ಲಾಕ್ ಫಂಗಸ್ ರೋಗ ತಗುಲಿದೆ. ಹೆಚ್ಚಿನ ಮಾಹಿತಿ ಕಲೆಹಾಕಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ಒ ಡಾ. ಅನಂತ ದೇಸಾಯಿ ತಿಳಿಸಿದ್ದಾರೆ.
ಇದನ್ನೂ ಓದಿ:ಹೆಡ್ ಕಾನ್ಸ್ಟೇಬಲ್ ಸಾವು: ಬ್ಲಾಕ್ ಫಂಗಸ್ನಿಂದ ಮೃತಪಟ್ಟಿರುವ ಶಂಕೆ
ಈ ಮಧ್ಯೆ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಅವರು ಮಾತನಾಡಿ, ಆಕ್ಸಿಜನ್ ಮೂಲಕ ಹರಡುವ ಈ ರೋಗ ಅಪಾಯಕಾರಿಯಾಗಿದ್ದು, ಸರ್ಕಾರಿ ಹಾಗೂ ಕೆಲವೊಂದು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಕೊರೊನಾ ರೋಗಿಗಳಿಗೆ ನೀಡುವ ಆಕ್ಸಿಜನ್ ಸೋರಿಕೆ ಆಗದಂತೆ ಹಾಗೂ ಸೂಕ್ತ ನಿರ್ವಹಣೆ ಮಾಡುವ ಮೂಲಕ ಬ್ಲಾಕ್ ಫಂಗಸ್ ತಡೆಗಟ್ಟಲು ಸಾಧ್ಯವಿದೆ. ಈ ಹಿನ್ನೆಲೆ ಈಗಾಗಲೇ ಆಸ್ಪತ್ರೆಗೆಗಳಿಗೆ ಮಾಹಿತಿ ನೀಡಲಾಗಿದೆ. ಕೊರೊನಾ ಬೆನ್ನೆಲ್ಲೇ ಈಗ ಅಪಾಯಕಾರಿ ಬ್ಲಾಕ್ ಫಂಗಸ್ ರೋಗ ಹರಡುತ್ತಿರುವುದು ಜನತೆಗೆ ಆತಂಕ ಮೂಡಿಸಿದೆ. ಈ ರೋಗ ಹರಡಿದರೆ ಜೀವ ಉಳಿಯುವುದೇ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.