ಬಾಗಲಕೋಟೆ : ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳದೆ, ವ್ಯರ್ಥ ವಸ್ತುಗಳಿಂದ ಸುಂದರ ಉದ್ಯಾನವನವನ್ನು ನಿರ್ಮಿಸುವ ಮೂಲಕ ಜಿಲ್ಲೆಯ ಮುರನಾಳ ಗ್ರಾಮದ ನಿವಾಸಿ ಸಂಜು ಬಡಿಗೇರ ಎಂಬುವರು ಗಮನ ಸೆಳೆದಿದ್ದಾರೆ.
ವ್ಯರ್ಥ ವಸ್ತುಗಳಿಂದ ಸುಂದರ ಗೃಹ ಉದ್ಯಾನ ನಿರ್ಮಾಣ ಅಕ್ಕಸಾಲಿಗ ಹಾಗೂ ಬಡಿಗತನ ಉದ್ಯೋಗ ಮಾಡುತ್ತಾ ಬಂದಿರುವ ಸಂಜು ಅವರ ಕುಟುಂಬ ಲಾಕ್‌ಡೌನ್ ಸಮಯವನ್ನು ಹಾಳು ಮಾಡಿಕೊಳ್ಳದೆ ಮನೆಯ ಮುಂದೆ ಉದ್ಯಾನವನ ನಿರ್ಮಿಸಿದ್ದಾರೆ.
ಚಿಕ್ಕ ಮನೆಯ ಮುಂದೆ ಚೊಕ್ಕದಾಗಿ ನಿರ್ಮಾಣವಾಗಿರುವ ಗಾರ್ಡನ್ನಲ್ಲಿ, ವ್ಯರ್ಥ ಕಟ್ಟಿಗೆ ಬಳಸಿ ಕಾಂಪೌಡ್, ಪ್ಲಾಸ್ಟಿಕ್ ಬಾಟಲ್ ಕಟ್ ಮಾಡಿ ಉದ್ಯಾನವನಕ್ಕೆ ನೀರು ಉಣಿಸುವಂತೆ ಯೋಜನೆ ರೂಪಿಸಿದ್ದಾರೆ.
ಅಲ್ಲದೆ, ಬೈಕ್ ಹಾಗೂ ಕಾರು ಟೈರ್ಗೆ ಆಕರ್ಷಕ ಬಣ್ಣ ಹಚ್ಚಿ, ಅದರಿಂದ ಚೇರ್ ಹಾಗೂ ಟಿಪಾಯಿ ಮಾಡಿದ್ದಾರೆ. ತಗಡಿನ ಡಬ್ಬವನ್ನು ಕಟ್ ಮಾಡಿ ಅದರಲ್ಲಿ ಕಾಳು-ಕಡಿ ಹಾಕಿ ಪಕ್ಷಿಗಳಿಗೂ ಆಹಾರ ನೀಡುತ್ತಿದ್ದಾರೆ. ಇದರಿಂದ ಪಕ್ಷಿಗಳು ಸುಂದರ ಕೈತೋಟದಲ್ಲಿ ವಾಸಿಸುತ್ತಿವೆ.
ಮನೆಯಲ್ಲಿದ್ದು ಏನ್ ಮಾಡ್ಬೇಕು ಎನ್ನುವ ಜನರಿಗೆ ಮನೆ ಮುಂದೆ ಸುಂದರ ಕೈತೋಟ ನಿರ್ಮಿಸುವ ಮೂಲಕ ಸಂಜು ಬಡಿಗೇರ ಅವರು ಮಾದರಿಯಾಗಿದ್ದಾರೆ.