ಬಾಗಲಕೋಟೆ :ಮಂಗಳೂರು ಮತ್ತು ಉಡುಪಿಯಿಂದ ಬಸ್‍ಗಳ ಮೂಲಕ ಕಳುಹಿಸಲಾದ ಜಿಲ್ಲೆಯ ಕಾರ್ಮಿಕರು ಗುರುವಾರ ಬಾಗಲಕೋಟೆಗೆ ಬಂದು ತಲುಪಿದ್ದಾರೆ. ಅವರೆಲ್ಲರನ್ನು ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೊಳಪಡಿಸಲಾಯಿತು.
ಹೊರ ಜಿಲ್ಲೆಗಳಿಂದ ಆಗಮಿಸಿದ 438 ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್.. ಮಂಗಳೂರಿನಿಂದ 10, ಉಡುಪಿಯಿಂದ 3 ಹೀಗೆ ಒಟ್ಟು 13 ಬಸ್‍ಗಳಲ್ಲಿ 438 ಕಾರ್ಮಿಕರು ಮರಳಿ ಜಿಲ್ಲೆಗೆ ಆಗಮಿಸಿದ್ದಾರೆ. ಕಾರ್ಮಿಕರು ಬಾಗಲಕೋಟೆ, ಬಾದಾಮಿ, ಇಳಕಲ್ಲ ಹಾಗೂ ಹುನಗುಂದ ತಾಲೂಕಿನವರಾದ ಇವರನ್ನೆಲ್ಲ ಇಲ್ಲಿನ ನವನಗರದ ನೂತನ ಬಸ್ ನಿಲ್ದಾಣದಲ್ಲಿಳಿಸಲಾಯ್ತು. ಅವರೆಲ್ಲರ ಹೆಸರು ಮತ್ತು ಮೊಬೈಲ್ ನಂಬರ್ ಪಡೆದು ಅವರನ್ನು ಅದೇ ಬಸ್‍ಗಳ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡಲಾಯಿತು.
ಬಂದಂತಹ ಕಾರ್ಮಿಕರನ್ನು ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್ ಮಾಡಿ, ಅವರ ಮನೆಯ ಬಾಗಿಲಿಗೆ ಸ್ಟಿಕ್ಕರ್ ಸಹ ಅಂಟಿಸಲಾಗುತ್ತಿದೆ. ಅಲ್ಲದೇ 14 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುವುದು ಎಂದು ಕೋವಿಡ್-19 ವಿಶೇಷ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ತಿಳಿಸಿದರು. ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಾರ್ಮಿಕರ ಮಾಹಿತಿ ಸಂಗ್ರಹಿಸಿಟ್ಟುಕೊಂಡು ನಿಗಾವಹಿಸಲು ಸೂಚಿಸಲಾಯಿತು.
ಮಂಗಳೂರು ಮತ್ತು ಉಡುಪಿ ಜಿಲ್ಲಾಡಳಿತದಿಂದ ಬಂದ ಮಾಹಿತಿ ಮೇರೆಗೆ ಬಾಗಲಕೋಟೆ ಜಿಲ್ಲಾಡಳಿತ ನವನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರ ಮಾಹಿತಿ ಪಡೆದು ಸುರಕ್ಷಿತವಾಗಿ ಮನೆಯಲ್ಲಿಯೇ ಇರುವಂತೆ ತಿಳಿಸಲಾಯಿತು. ತಾಲೂಕಾಡಳಿತಾಧಿಕಾರಿ ಡಾ. ಬಿ ಜಿ ಹುಬ್ಬಳ್ಳಿ ಕಾರ್ಮಿಕರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿದರು.