ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಕಿಲಾರಿ ಹೋರಿಗಳು ಎಂದರೆ ಎಲ್ಲಿಲ್ಲದ ಬೇಡಿಕೆ ಇದೆ. ಇಂತಹ 18 ತಿಂಗಳ ಕಿಲಾರಿ ತಳಿಯ ಹೋರಿಯೊಂದು ಬರೋಬ್ಬರಿ 3.25 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ರೈತನ ಮುಖದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ನಿವಾಸಿ ಭೀಮಪ್ಪ ಬರಡಗಿ ಎಂಬುವರ ಕಿಲಾರಿ ಹೋರಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ಅಶೋಕ ಕುರಿ ಎಂಬುವರು ಮೂರು ಲಕ್ಷ 25 ಸಾವಿರ ರೂ. ನೀಡಿ ಖರೀದಿಸಿರುವುದು ಎಲ್ಲರ ಗಮನ ಸೆಳೆದಿದೆ.
3.25 ಲಕ್ಷ ರೂ.ಗೆ ಮಾರಾಟವಾದ ಕಿಲಾರಿ ಹೋರಿ ಜಾನುವಾರು ಪ್ರದರ್ಶನದಲ್ಲಿ ಭಾಗಿಯಾಗಿ ಬಹುಮಾನ ಪಡೆದುಕೊಂಡು ಗಮನ ಸೆಳೆಯುತ್ತಿದ್ದ 6 ಅಡಿ ಎತ್ತರದ ಈ ಹೋರಿಗೆ ಬೇಡಿಕೆ ಹೆಚ್ಚಾಗಿತ್ತು. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ವಿವಿಧ ಕಡೆ ಹೋರಿ ಪ್ರದರ್ಶನದಲ್ಲಿ ಭಾಗಿಯಾಗಿ ಬಹುಮಾನ ಕೂಡಾ ಗೆದ್ದು ತಂದಿದೆ. ಆರು ತಿಂಗಳಿದ್ದಾಗ ಭೀಮಪ್ಪ ಅವರು ಒಂದು ಲಕ್ಷಕ್ಕೆ ಈ ಹೋರಿಯನ್ನು ಖರೀದಿಸಿದ್ದರು. ಇದೀಗ 3.25 ಸಾವಿರಕ್ಕೆ ಮಾರಾಟವಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇನ್ನು ಕಿಲಾರಿ ಹೋರಿ ಖರೀದಿಸಿದ್ದ ಅಶೋಕ ಇಂದು ಹೋರಿ ಒಯ್ಯೋದಕ್ಕೆ ಬಂದಾಗ ಭೀಮಪ್ಪ ಬರಡಗಿ ಕುಟುಂಬಸ್ಥರು ಹೋರಿಗೆ ಮಾಲೆ ಹಾಕಿ, ಕೊಂಬಿಗೆ ಅಲಂಕಾರ ಮಾಡಿ ಮೈತುಂಬ ಬಣ್ಣ ಬಳಿದು ಸಂಭ್ರಮದಿಂದ ಬೀಳ್ಕೊಟ್ಟರು.
ಕಿಲಾರಿ ಹೋರಿಗೆ ಈ ಪ್ರದೇಶದಲ್ಲಿ ಭಾರಿ ಬೇಡಿಕೆ ಇದ್ದು, ಮನೆ ಮಗನಂತೆ ರೈತರು ಹೋರಿಗಳನ್ನು ಬೆಳೆಸುತ್ತಾರೆ. ನಿತ್ಯ ಪೌಷ್ಟಿಕ ಆಹಾರ ನೀಡಿ, ದಷ್ಟ ಪುಷ್ಟವಾಗಿ ಬೆಳೆಸಿ ಹೋರಿ ಸ್ಪರ್ಧೆಗೆ ಕಳುಹಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಎಲ್ಲಿಯೇ ಸ್ಪರ್ಧೆ ಮಾಡಿದರೂ ಪ್ರದರ್ಶನ ನೀಡಿ ಬಹುಮಾನ ಗಳಿಸುವ ಜೊತೆಗೆ ಜಮೀನಿನ ಕೆಲಸಕ್ಕೆ ಸಹ ಈ ಹೋರಿಗಳು ಸಹಾಯವಾಗುತ್ತವೆ.