ಗುರುಗಾಂವ್(ಹರಿಯಾಣ):ಟೋಕಿಯೋ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ರವಿ ಕುಮಾರ್ ದಹಿಯಾ ಫೈನಲ್ನಲ್ಲಿ ಸೋಲು ಕಂಡಿದ್ದರೂ ಕೂಡ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರ ಸಾಧನೆಗೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಹರಿಯಾಣ ಸರ್ಕಾರ ಅವರಿಗೆ ಬಂಪರ್ ಬಹುಮಾನ ಘೋಷಣೆ ಮಾಡಿದ್ದು, 4 ಕೋಟಿ ರೂ. ನಗದು, ಸರ್ಕಾರಿ ಕೆಲಸ ಹಾಗೂ ಪ್ಲಾಟ್ ನೀಡಲು ನಿರ್ಧರಿಸಿದೆ. ಇದೇ ವಿಚಾರವಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ರವಿ ಕುಮಾರ್ ದಹಿಯಾ ಗ್ರಾಮ ನಹಾರಿಯಲ್ಲಿ ಕುಸ್ತಿಗೋಸ್ಕರ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ನಮ್ಮ ಹೆಮ್ಮೆಯ ಪುತ್ರ ರವಿ ದಹಿಯಾ, ಹರಿಯಾಣ ಮಾತ್ರವಲ್ಲ ಇಡೀ ದೇಶದ ಜನರ ಹೃದಯ ಗೆದ್ದಿದ್ದಾರೆ. ಬೆಳ್ಳಿ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು. ಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿರಿ: 2.5 ಕೋಟಿ ರೂ, ಸರ್ಕಾರಿ ಕೆಲಸ & ಪ್ಲಾಟ್ : ಕಂಚು ಗೆದ್ದ ಹರಿಯಾಣ ಹಾಕಿ ಪ್ಲೇಯರ್ಸ್ಗೆ ಬಂಪರ್
ಹಾಕಿ ಪುರುಷರ ತಂಡ ಕೂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದರಲ್ಲಿ ಹರಿಯಾಣದ ಇಬ್ಬರು ಪ್ಲೇಯರ್ಸ್ ಭಾಗಿಯಾಗಿದ್ದಾರೆ. ಅವರಿಗೂ ಖಟ್ಟರ್ ಸರ್ಕಾರ ಬಹುಮಾನ ಘೋಷಣೆ ಮಾಡಿದ್ದು, 2.5 ಕೋಟಿ ರೂ. ನಗದು, ಸರ್ಕಾರಿ ಕೆಲಸ ಹಾಗೂ ಪ್ಲಾಟ್ ನೀಡುವುದಾಗಿ ಈಗಾಗಲೇ ತಿಳಿಸಿದ್ದಾರೆ.