ಕರ್ನಾಟಕ

karnataka

ETV Bharat / sports

ಸಿಂಧು ಪ್ರೋತ್ಸಾಹದ ನುಡಿಗಳು ನನ್ನ ಕಣ್ಣಲ್ಲಿ ನೀರು ತರಿಸಿತು: ತೈಪೆಯ ಬೆಳ್ಳಿ ಪದಕ ವಿಜೇತೆ - ಟೋಕಿಯೋ ಒಲಿಂಪಿಕ್ಸ್​​ 21

ಟೋಕಿಯೋ ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್ ವಿಭಾಗದ ಬೆಳ್ಳಿ ಪದಕ ವಿಜೇತೆ ತೈಪೆಯ ತೈ ತ್ಸು ಯಿಂಗ್, ಭಾರತದ ಆಟಗಾರ್ತಿ ಪಿ.ವಿ ಸಿಂಧು ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

Tokyo Olympics
ಟೋಕಿಯೋ ಒಲಿಂಪಿಕ್ಸ್​​

By

Published : Aug 2, 2021, 11:20 AM IST

ಟೋಕಿಯೋ:ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್​ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ವಿಶ್ವದ ನಂ 1 ಬ್ಯಾಡ್ಮಿಂಟನ್​ ಆಟಗಾರ್ತಿ ತೈಪೆಯ ತೈ ತ್ಸು ಯಿಂಗ್, ಪದಕ ಪಡೆದ ಬಳಿಕ ಭಾರತದ ಪಿ.ವಿ ಸಿಂಧು ಆಡಿದ ಮಾತುಗಳು ನನ್ನ ಕಣ್ಣಾಲಿಗಳು ತುಂಬುವಂತೆ ಮಾಡಿತು ಎಂದಿದ್ದಾರೆ.

ಮೂರನೇ ಬಾರಿಗೆ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯಿಂಗ್ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ 18-21, 21-19, 18-21 ಸೆಟ್​ಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡರು.

ಐದು ವರ್ಷಗಳ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ, ಸ್ಪೇನ್‌ನ ಕೆರೊಲಿನಾ ಮರಿನ್‌ ವಿರುದ್ಧ ಫೈನಲ್​ ಪಂದ್ಯದಲ್ಲಿ ಆಡಿದ್ದ ಸಿಂಧು, ಬೆಳ್ಳಿ ಪದಕವನ್ನು ಪಡೆದಿದ್ದರು.

ಪಂದ್ಯದ ಬಳಿಕ ನನ್ನ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಇತ್ತು. ಆ ವೇಳೆ ಸಿಂಧು ಓಡಿ ಬಂದು ನನ್ನನ್ನು ಅಪ್ಪಿಕೊಂಡರು, ನನ್ನ ಮುಖವನ್ನು ನೋಡಿಕೊಂಡು, ನಿಮಗೆ ಇಂದಿನ ದಿನ ತೃಪ್ತಿಕರವಾಗಿಲ್ಲ. ನೀವು ತುಂಬಾ ಒಳ್ಳೆಯವರು ಎಂದು ನನಗೆ ಗೊತ್ತು. ಇದು ನಿಮ್ಮ ದಿನವಲ್ಲ ಎಂದು ತಿಳಿದುಕೊಳ್ಳಿ ಎಂದರು. ನಂತರ ನನ್ನ ಭುಜವನ್ನು ಹಿಡಿದು, ನಿಮ್ಮ ಬಗ್ಗೆ ಎಲ್ಲಾ ತಿಳಿದಿದೆ ಅಂತ ಹೇಳಿದರು ಎಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಟೋಕಿಯೋ ಫೈನಲ್​ ಪಂದ್ಯದ ಕುರಿತು ಯಿಂಗ್ ಬರೆದುಕೊಂಡಿದ್ದಾರೆ.

ಇದನ್ನೂಓದಿ: ಚಕ್‌ದೇ ಇಂಡಿಯಾ! ಬಲಾಢ್ಯ ಆಸ್ಟ್ರೇಲಿಯಾ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ 'ಭಾರತೀ'ಯರು!

ಸಿಂಧು ಅವರ ಆ ಮಾತುಗಳು ನನ್ನ ಕಣ್ಣಲ್ಲಿ ನೀರು ಬರುವಂತೆ ಮಾಡಿತು. ನಾನು ತುಂಬಾ ದು:ಖಿತಳಾದೆ, ಯಾಕೆಂದರೆ, ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಸಿಂಧು ಬಗ್ಗೆ ತೈ ತ್ಸು ಯಿಂಗ್ ಹೇಳಿಕೊಂಡಿದ್ದು, ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಕಳೆದ ಶನಿವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್​ನ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧುವನ್ನು 21-18, 21-12 ಸೆಟ್​ಗಳಿಂದ ತೈ ತ್ಸು ಸೋಲಿಸಿದ್ದರು. ಈ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಪಡೆಯುವ ಭಾರತದ ಕನಸು ಕೊನೆಗೊಂಡಿತ್ತು.

ಬಳಿಕ ಸಿಂಧು ವಿಶ್ವದ ನಂ .9 ರ ಆಟಗಾರ್ತಿ ಚೀನಾದ ಬಿಂಗ್ ಜಿಯಾವೋ ವಿರುದ್ಧ ಗೆದ್ದು ಕಂಚಿನ ಪದಕ ಪಡೆದರು. ಈ ಮೂಲಕ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ABOUT THE AUTHOR

...view details