ಟೋಕಿಯೋ (ಜಪಾನ್): ಪ್ಯಾರಾಲಿಂಪಿಕ್ನ ಮಹಿಳಾ ಶೂಟಿಂಗ್ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದ ಅವನಿ ಲೇಖರಾ ಇದೀಗ ಮುಗ್ಗರಿಸಿದ್ದಾರೆ. ಇಂದು ನಡೆದ ಮಿಶ್ರ 50 ಮೀಟರ್ ರೈಫಲ್ ಶೂಟಿಂಗ್ ಎಸ್ಹೆಚ್1 ಸ್ಪರ್ಧೆಯಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಅವನಿ ಲೇಖರಾ 612 ಅಂಕಗಳೊಂದಿಗೆ 28ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇವರ ಜೊತೆ ಇನ್ನಿಬ್ಬರು ಶೂಟರ್ಸ್ ಸಹ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸದೆ ನಿರಾಸೆ ಮೂಡಿಸಿದರು.
ಸಿದ್ದಾರ್ಥ ಬಾಬು ಒಟ್ಟು 617.2 ಅಂಕ ಗಳಿಸಿ ಚೀನಾ ಆಟಗಾರನಿಗಿಂತಲೂ 0.2 ಅಂಕ ಹಿಂದೆ ಬಿದ್ದು, ಮುಂದಿನ ಸುತ್ತಿನಿಂದ ವಂಚಿತರಾದರು. ಇನ್ನೋರ್ವ ಆಟಗಾರ ದೀಪಕ್ ಒಟ್ಟು 602.2 ಅಂಕ ಗಳಿಸಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯದೆ 46ನೇ ಸ್ಥಾನ ಗಳಿಸಿ ಹೊರಬಿದ್ದರು.
ಇದಕ್ಕೂ ಮೊದಲು 19 ವರ್ಷದ ಅವನಿ 10 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಬಳಿಕ ಮಹಿಳಾ ವಿಭಾಗದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಓದಿ:ಪ್ಯಾರಾಲಿಂಪಿಕ್ಸ್ ಸಮಾರೋಪ ಸಮಾರಂಭ: ಭಾರತದ ಧ್ವಜಧಾರಿಯಾಗಿ ಅವನಿ ಲೇಖರಾ