ಲಂಡನ್: ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ನ ಟೆನಿಸ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು 6-3, 6-7 (4/7), 6-3 ಅಂತರದಿಂದ ಮಣಿಸಿದ ಅಗ್ರ ಶ್ರೇಯಾಂಕಿತ ಆಶ್ಲಿ ಬಾರ್ಟಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇದು ಅವರ 2ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ
Wimbledon 2021: ಕರೋಲಿನಾ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಆ್ಯಶ್ಲಿ ಬಾರ್ಟಿ
ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಮಹಿಳಾ ವಿಭಾಗದ ಫೈನಲ್ನಲ್ಲಿ ಕರೋಲಿನಾ ಪ್ಲಿಸ್ಕೋವರನ್ನು ಮಣಿಸಿದ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಸ್ಟ್ರೇಲಿಯಾದ ಇವೊನೆ ಗೂಲಾಗೊಂಗ್ ಕಾವ್ಲೆ ಅವರು ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ 50ನೇ ವಾರ್ಷಿಕೋತ್ಸವದಂದೇ 25 ವರ್ಷದ ಆಸೀಸ್ ಆಟಗಾರ್ತಿ ಬಾರ್ಟಿ ಈ ಸಾಧನೆ ಮಾಡಿದ್ದಾರೆ. ಜತೆಗೆ ಕಳೆದ 41 ವರ್ಷಗಳಿಂದ ಆಸ್ಟ್ರೇಲಿಯಾ ಈ ಪ್ರಶಸ್ತಿಗೋಸ್ಕರ ಕಾಯುತ್ತಿತ್ತು. ಇದೀಗ ಅದರಲ್ಲಿ ಜಯ ಕಂಡಿದೆ.
1971ರಲ್ಲಿ ಕಾವ್ಲೆ ಅವರು ಪಾಲ್ಗೊಂಡಿದ್ದ ಪಂದ್ಯದ ಗೌರವಾರ್ಥವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪನ್ನು ಆ್ಯಶ್ಲಿ ಬಾರ್ಟಿ ಧರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಶಸ್ತಿ ಗೆದ್ದಿರುವುದು ಇವೊನೆ ಹೆಮ್ಮೆಪಡುವಂತೆ ಮಾಡಿರುವುದಾಗಿ ಭಾವಿಸುತ್ತೇನೆ ಎಂದು ಹೇಳಿದರು. 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಬಾರ್ಟಿ ಚಾಂಪಿಯನ್ ಆಗಿದ್ದರು.