ನವದೆಹಲಿ:2016ರರಿಯೋಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಕ್ಷಿ ಮಲಿಕ್ ಇಂದು ಕುಸ್ತಿಗೆ ನಿವೃತ್ತಿ ಘೋಷಿಸಿದರು. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬೆಂಬಲಿತ ಸಂಜಯ್ ಕುಮಾರ್ ಸಿಂಗ್ ಅವರನ್ನು ಡಬ್ಲ್ಯುಎಫ್ಐಗೆ ನೂತನ ಅಧ್ಯಕ್ಷರಾಗಿ ಗುರುವಾರ ನೇಮಕ ಮಾಡಲಾಗಿದೆ. ಈ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾಕ್ಷಿ, ಕುಸ್ತಿಯನ್ನು ತ್ಯಜಿಸುವುದಾಗಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
"ನಾವು 40 ದಿನಗಳ ಕಾಲ ರಸ್ತೆಗಳಲ್ಲಿ ಮಲಗಿದ್ದೇವೆ. ದೇಶದ ಅನೇಕ ಭಾಗಗಳಿಂದ ಸಾಕಷ್ಟು ಜನ ನಮ್ಮನ್ನು ಬೆಂಬಲಿಸಲು ಬಂದಿದ್ದರು. ಬ್ರಿಜ್ ಭೂಷಣ್ ಸಿಂಗ್ ಅವರ ಉದ್ಯಮದ ಪಾಲುದಾರ ಮತ್ತು ಆಪ್ತ ಸಹಾಯಕ ಡಬ್ಲ್ಯುಎಫ್ಐಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ನಾನು ಕುಸ್ತಿಯನ್ನು ತ್ಯಜಿಸುತ್ತಿದ್ದೇನೆ" ಎಂದು ಹೇಳುತ್ತಾ ಕಣ್ಣೀರಿಟ್ಟರು.