ಲಂಡನ್: ಉಕ್ರೇನಿಯನ್ ವೈಲ್ಡ್ ಕಾರ್ಡ್ ಎಲಿನಾ ಸ್ವಿಟೋಲಿನಾ ಮಂಗಳವಾರ ನಡೆದ ವಿಂಬಲ್ಡನ್ ಕ್ವಾರ್ಟರ್ ಫೈನಲ್ಸ್ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಇಗಾ ಸ್ವಿಯಾಟೆಕ್ರನ್ನು ಮಣಿಸಿ ಸೆಮಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಹೆಚ್ಚು ಕಡಿಮೆ 3 ಗಂಟೆಗಳ ಕಾಲ ಎಲಿನಾ ಸ್ವಿಟೋಲಿನಾ ಮತ್ತು ಇಗಾ ಮೈದಾನದಲ್ಲಿ ಕಾದಾಡಿದರು. ನೆರೆದಿದ್ದ ಪ್ರೇಕ್ಷಕರಿಗೆ ಇಬ್ಬರು ಘಟಾನುಘಟಿಗಳ ಹೋರಾಟ ರೋಮಾಂಚನವನ್ನು ಉಂಟುಮಾಡಿತ್ತು. ಇಗಾ ಸ್ವಿಯಾಟೆಕ್ ವಿರುದ್ಧ 7-5, 6-7(5), 6-2 ರಿಂದ ಗೆದ್ದ ಎಲಿನಾ, ತಮ್ಮ ವೃತ್ತಿಜೀವನದ ಮೂರನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
28 ವರ್ಷ ವಯಸ್ಸಿನವರಾದ ಎಲಿನಾ ಕಳೆದ ಅಕ್ಟೋಬರ್‌ನಲ್ಲಿ ಮಗಳು ಸ್ಕೈಗೆ ಜನ್ಮ ನೀಡಿದ್ದರು. ನಂತರ ಅವರು ಗಂಭೀರ ಅನಾರೋಗ್ಯಕ್ಕೂ ತುತ್ತಾಗಿದ್ದರು. ಇದೆಲ್ಲದರ ಜೊತೆಗೆ ಅವರ ದೇಶವನ್ನು ರಷ್ಯಾ ಆಕ್ರಮಿಸಿಕೊಂಡು ನಾಗರೀಕರು ಸಂಕಷ್ಟದಲ್ಲಿದ್ದಾಗ ನೆರವಿಗೂ ದಾವಿಸಿದ್ದರು. ಈಗ ಇದೆಲ್ಲದರಿಂದ ಗಟ್ಟಿಯಾಗಿರುವ ಎಲಿನಾ ಅಗ್ರ ಶ್ರೇಯಾಂಕಿತೆಯನ್ನು ಮಣಿಸಲು ತಮ್ಮ ಸರ್ವ ಶಕ್ತಿಯನ್ನೂ ಬಳಸಿಕೊಂಡರು. ಮಗುವಿಗ ಜನ್ಮ ನೀಡಿದ ನಂತರ ಭಾಗವಹಿಸಿದ ಎರಡನೇ ಗ್ರ್ಯಾಂಡ್ ಸ್ಲಾಮ್ ಇದಾಗಿದೆ. ವಿಶ್ವದ ನಂಬರ್ 1 ಆಟಗಾರ್ತಿಯನ್ನು ಮಣಿಸಿದ ಎಲಿನಾ ನಾಳೆ ನಡೆಯಲಿರುವ ಸೆಮಿಫೈನಲ್ನಲ್ಲಿ ಮಾರ್ಕೆಟಾ ವೊಂಡ್ರೊಸೊವಾ ಅವರ ವಿರುದ್ಧ ಆಡಲಿದ್ದಾರೆ.
ಗೆದ್ದ ನಂತರ ಮಾತನಾಡಿದ ಅವರು "ಯುದ್ಧವು ನನ್ನನ್ನು ಬಲಪಡಿಸಿತು ಮತ್ತು ನನ್ನನ್ನು ಮಾನಸಿಕವಾಗಿ ಬಲಗೊಳಿಸಿತು ಎಂದು ನಾನು ಭಾವಿಸುತ್ತೇನೆ"ಎಂದು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದು ತನ್ನ ತಾಯ್ನಾಡಿನ ಮೇಲೆ ರಷ್ಯಾ ಮಾಡಿರುವ ಆಕ್ರಮಿಸಿಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ.
"ಮಾನಸಿಕವಾಗಿ ನಾನು ಕಷ್ಟಕರ ಸಂದರ್ಭಗಳನ್ನು ವಿಪತ್ತು ಎಂದು ಪರಿಗಣಿಸುವುದಿಲ್ಲ. ಜೀವನದಲ್ಲಿ ಕೆಟ್ಟ ವಿಷಯಗಳಲ್ಲಿ ನಾನು ಹೆಚ್ಚು ಶಾಂತವಾಗಿದ್ದೆ. ಅದು ನನ್ನನ್ನು ಹಿಂತಿರುಗಲು ಈ ದೊಡ್ಡ ಪ್ರೇರಣೆ ನೀಡಿತು. ನಾನು ಮಗುವನ್ನು ಹೊಂದಿದ್ದೇನೆ ಮತ್ತು ಯುದ್ಧವು ನನ್ನನ್ನು ವಿಭಿನ್ನ ವ್ಯಕ್ತಿಯನ್ನಾಗಿ ಮಾಡಿದೆ ಎಂದು ನಾನು ಭಾವಿಸುತ್ತೇನೆ. ನಾನು ವಿಷಯಗಳನ್ನು ಸ್ವಲ್ಪ ವಿಭಿನ್ನವಾಗಿ ನೋಡಲು ಇಚ್ಛಿಸುತ್ತೇನೆ" ಎಂದಿದ್ದಾರೆ.