ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟ ಪೋಗಟ್ ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಮತ್ತು ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಶನಿವಾರ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಎರಡು ಪ್ರಶಸ್ತಿಗಳನ್ನು ಇಲ್ಲಿನ ಕರ್ತವ್ಯ ಪಥದ ಮಧ್ಯದಲ್ಲಿ ಇಟ್ಟು ಹಿಂದಿರುಗಿದ್ದಾರೆ. ವಿನೇಶ್ ಫೋಗಟ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಲುಪದಂತೆ ತಡೆದರು. ಇದರಿಂದ ಅವರು ಪ್ರಶಸ್ತಿಗಳನ್ನು ಕರ್ತವ್ಯ ಪಥದಲ್ಲಿ ಬಿಟ್ಟು ಮರಳಿದ್ದಾರೆ.
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಲು ನಿರ್ಧರಿಸಿದ್ದರು. ಕುಸ್ತಿಪಟುಗಳು ನ್ಯಾಯ ಪಡೆಯಲು ಹೋರಾಡುತ್ತಿರುವ ಸಮಯದಲ್ಲಿ ಇಂತಹ ಗೌರವಗಳು ಅರ್ಥಹೀನವಾಗಿವೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಬಂಜರಂಗ್ ಪೂನಿಯಾ ಅವರು ಸಹ ಪ್ರಶಸ್ತಿಯನ್ನು ಹಿಂದಿರುಗಿಸಲು ಪ್ರಧಾನಿ ಕಚೇರಿಗೆ ತೆರಳುವಾಗ ಪೊಲೀಸರು ತಡೆದರು ಎಂದು ರಸ್ತೆಯಲ್ಲಿಟ್ಟು ತೆರಳಿದ್ದರು. ಅದೇ ರೀತಿಯಲ್ಲಿ ವಿನೇಶ್ ಫೋಗಟ್ ಅವರು ಪೊಲೀಸರು ತಡೆದರು ಎಂದು ರಸ್ತೆ ನಡುವೆಯೇ ಪ್ರಶಸ್ತಿಗಳನ್ನು ಇಟ್ಟು ಮರಳಿದ್ದಾರೆ. ಪ್ರಶಸ್ತಿಗಳನ್ನು ಪೊಲೀಸರು ಸುರಕ್ಷಿತವಾಗಿರಿಸಿಕೊಂಡಿದ್ದಾರೆ.
ಫೋಗಟ್, ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಹೋರಾಟ ನಡೆಸಿದ್ದರು. ಇದರಿಂದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೆಳಗಿಳಿದಿದ್ದರು. ಇತ್ತೀಚೆಗೆ ಡಬ್ಲ್ಯುಎಫ್‌ಐನ ಚುನಾವಣೆ ನಡೆದಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಮೂವರು ಹೋರಾಟಗಾರರು ಕ್ರೀಡಾ ಸಚಿವಾಲಯದ ಬಳಿ ಬ್ರಿಜ್ ಭೂಷಣ್ ಆಪ್ತರು ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಷರತ್ತು ಹಾಕಿದ್ದರು. ಇದಕ್ಕೆ ಕ್ರೀಡಾ ಸಚಿವಾಲಯವೂ ಒಪ್ಪಿಗೆ ನೀಡಿತ್ತು. ಆದರೆ ಸಿಂಗ್ ಅವರ ಆಪ್ತರೇ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದರೆ, ಬಜರಂಗ್ ಪುನಿಯಾ ಮತ್ತು ಫೋಗಟ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.
ಚುನಾಯಿತ ಅಧ್ಯಕ್ಷರು ತರಾತುರಿಯಲ್ಲಿ ಸ್ಪರ್ಧೆಯನ್ನು ಘೋಷಿಸಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮತ್ತು ಡಬ್ಲ್ಯುಎಫ್‌ಐ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕ್ರೀಡಾ ಸಚಿವಾಲಯವು ಹೊಸದಾಗಿ ಆಯ್ಕೆಯಾದ ಸಮಿತಿಯನ್ನು ಅಮಾನತುಗೊಳಿಸಿತ್ತು. ನಂತರ ಕ್ರೀಡಾ ಸಚಿವಾಲಯದ ನಿರ್ದೇಶನದ ಮೇರೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಬುಧವಾರ ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರಗಳನ್ನು ನಡೆಸಲು ಒಲಿಂಪಿಯನ್ ಎಂ.ಎಂ ಸೋಮಯ್ಯ ಅವರನ್ನು ಒಳಗೊಂಡ ಮೂವರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ:ಕ್ಷೇತ್ರ ರಕ್ಷಣೆ ವೇಳೆ ಡಿಕ್ಕಿ: ರಾಣಾಗೆ ಗಂಭೀರ ಗಾಯ