ಕರ್ನಾಟಕ

karnataka

ETV Bharat / sports

Tokyo Olympics: ಒತ್ತಡದಿಂದ ಕುಗ್ಗದೆ ಆಡಿ ಎಂದು ಆಥ್ಲೀಟ್​ಗಳಿಗೆ ಶುಭ ಹಾರೈಸಿದ ಪಿಎಂ ಮೋದಿ - ಅಥ್ಲೀಟ್​ಗಳ ಜೊತೆಗೆ ಪಿಎಂ ಮೋದಿ ಸಂವಾದ

ಮೋದಿ ಅವರ ಜೊತೆ ಸಂವಾದದಲ್ಲಿ ಪಾಲ್ಗೊಂಡ ಪಿವಿ ಸಿಂಧು, ಗಚಿಬೌಲಿ ಸ್ಟೇಡಿಯಂನಲ್ಲಿ ನನ್ನ ತರಬೇತಿ ಅತ್ಯುತ್ತಮವಾಗಿ ನಡೆಯುತ್ತಿದೆ. ಕ್ರೀಡಾಂಗಣವು ಒಲಿಂಪಿಕ್ಸ್‌ನಲ್ಲಿರುವಂತಹ ಸೌಲಭ್ಯಗಳೊಂದಿಗೆ ಸಾಮ್ಯತೆಯಿದೆ. ನಾನು ಜನವರಿಯಿಂದಲೂ ಅಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಅಧಿಕಾರಿಗಳು ಅಷ್ಟು ಬೇಗ ಅನುಮತಿ ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ತಮ್ಮ ತರಬೇತಿಯ ಬಗ್ಗೆ ತಿಳಿಸಿದ್ದಾರೆ..

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Jul 13, 2021, 7:20 PM IST

Updated : Jul 13, 2021, 10:48 PM IST

ನವದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಟೋಕಿಯೋ ಬೌಂಡ್ ಅಥ್ಲೀಟ್​ಗಳೊಡನೆ ವರ್ಚುವಲ್​ ಸಂವಾದ ನಡೆಸಿದರು. ಜುಲೈ 23ರಂದು ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಯಶಸ್ಸು ಸಿಗಲೆಂದು ಎಲ್ಲರಿಗೂ ಪ್ರಧಾನಮಂತ್ರಿಗಳು ಶುಭ ಹಾರೈಸಿದ್ದಾರೆ.

ಈ ಸಂವಾದದಲ್ಲಿ ಮೋದಿ ಮೊದಲು ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮತ್ತು ಅವರ ಪೋಷಕರೊಡನೆ ಮಾತನಾಡಿ, ಒಲಿಂಪಿಕ್ಸ್​ಗಾಗಿ ಗಚಿಬೌಲಿ ಸ್ಟೇಡಿಯಂನಲ್ಲಿ ತಯಾರಿ ಹೇಗೆ ನಡೆಯಿತ್ತಿದೆ ಎಂದು ಕೇಳಿದರು.

ಇದಕ್ಕುತ್ತರಿಸಿದ ಸಿಂಧು, ಗಚಿಬೌಲಿ ಸ್ಟೇಡಿಯಂನಲ್ಲಿ ನನ್ನ ತರಬೇತಿ ಅತ್ಯುತ್ತಮವಾಗಿ ನಡೆಯುತ್ತಿದೆ. ಕ್ರೀಡಾಂಗಣವು ಒಲಿಂಪಿಕ್ಸ್‌ನಲ್ಲಿರುವಂತಹ ಸೌಲಭ್ಯಗಳೊಂದಿಗೆ ಸಾಮ್ಯತೆಯಿದೆ. ನಾನು ಜನವರಿಯಿಂದಲೂ ಅಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಅಧಿಕಾರಿಗಳು ಅಷ್ಟು ಬೇಗ ಅನುಮತಿ ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಸಿಂಧು ತಂದೆಯೂ ಕೂಡ ಮೋದಿ ಅವರೊಂದಿಗೆ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಎಲ್ಲಾ ಮಕ್ಕಳು ಕಠಿಣ ಪರಿಶ್ರಮಪಟ್ಟು ದೇಶಕ್ಕೆ ಗೌರವ ತಂದುಕೊಡಬೇಕೆಂದು ಹೇಳಿದರು.

ಟೋಕಿಯೋಗೆ ಅರ್ಹತೆ ಪಡೆದಿರುವ 6 ಬಾರಿಯ ವಿಶ್ವ ಚಾಂಪಿಯನ್ ಮಣಿಪುರಿ ಬಾಕ್ಸರ್​ ಮೇರಿ ಕೋಮ್ ಸಂವಾದದ ವೇಳೆ, ತಮಗೆ ಲೆಜೆಂಡರಿ ಬಾಕ್ಸರ್​ ಮೊಹಮ್ಮದ್ ಅಲಿ ಸ್ಫೂರ್ತಿ. ಅವರಿಂದಲೇ ಪ್ರೇರಣೆ ಪಡೆದುಕೊಂಡಿರುವುದಾಗಿ ತಿಳಿಸಿದರು.

ಒಲಿಂಪಿಕ್ಸ್ ಬೌಂಡ್​ ಅಥ್ಲೀಟ್​ಗಳ ಜೊತೆ ಮೋದಿ ಸಂವಾದ

ಒತ್ತಡದಿಂದ ಕುಗ್ಗದಿರಲು ಚೋಪ್ರಾಗೆ ಪ್ರೇರಣೆ

ಟೋಕಿಯೋದಲ್ಲಿ ಭಾರತಕ್ಕೆ ಪದಕ ಭರವಸೆ ಮೂಡಿಸಿರುವ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಒತ್ತಡದಿಂದ ಕುಗ್ಗಬೇಡಿ ಎಂದ ಮೋದಿ, ಚೋಪ್ರಾರ ಗಾಯದ ಬಗ್ಗೆ ವಿಚಾರಿಸಿದರು. ಕ್ರೀಡಾಪಟು ಎಂದಮೇಲೆ ಗಾಯಗಳು ಸಾಮಾನ್ಯ, ಇದು ಜರುಗುತ್ತಿರುತ್ತದೆ.

ನಾವು ಚಿಕ್ಕದಾದ ವೃತ್ತಿ ಜೀವನವನ್ನು ಹೊಂದಿರುತ್ತೇವೆ. ಹಾಗಾಗಿ, ನಾವಾಗಿಯೇ ಪ್ರೇರಣೆ ಪಡೆಯಬೇಕು. ನನ್ನ ಒಂದು ವರ್ಷ ಗಾಯದಿಂದ ವ್ಯರ್ಥವಾಯಿತು. ಆದರೆ, ಒಲಿಂಪಿಕ್ ಕೊರೊನಾದಿಂದ ಮುಂದೂಡಿದ್ದರಿಂದ ನಾನು ಕಠಿಣ ತರಬೇತಿ ನಡೆಸಿದ್ದೇನೆ ಮತ್ತು ಒಲಿಂಪಿಕ್ಸ್​ ಮೇಲೆ ಸಂಪೂರ್ಣ ಗಮನ ನೀಡಿದ್ದೇನೆ ಎಂದು ತಿಳಿಸಿದರು. ಪ್ರಸ್ತುತ ಹಿಮ್ಮಡಿ ಗಾಯದಿಂದ ಚೇತರಿಸಿಕೊಂಡಿರುವ ನೀರಜ್​ ಸ್ವೀಡನ್​ನಲ್ಲಿ ಟೋಕಿಯೋ ಒಲಿಂಪಿಕ್ಸ್​ಗೆ ತರಬೇತಿ ಪಡೆಯುತ್ತಿದ್ದಾರೆ.

11.10 ಸೆಕೆಂಡ್​ಗಳ ಓಡುವ ಗುರಿ : ದ್ಯುತಿ

ನಾನು ಎರಡನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಹೋಗುತ್ತಿದ್ದೇನೆ. ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪ್ರಗತಿ ಹೊಂದುತ್ತಿದ್ದಾರೆ. ನಾನು ದೇಶಕ್ಕೆ ಗೌರವ ತಂದುಕೊಡಲು ಬಯಸುತ್ತೇನೆ. ಖಂಡಿತವಾಗಿ ಟೋಕಿಯೋದಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ. ನಾನು ಸ್ಪಲ್ಪ ಒತ್ತಡದಲ್ಲಿದ್ದೇನೆ. ಆದರೆ, ಒಳ್ಳೆಯ ಪ್ರಯತ್ನ ಮಾಡುತ್ತೇನೆ. ಒಲಿಂಪಿಕ್ಸ್​ನಲ್ಲಿ 11.10 ಸೆಕೆಂಡ್​ಗಳಲ್ಲಿ 100 ಮೀಟರ್ ಓಡಲು ಪ್ರಯತ್ನಿಸುತ್ತೇನೆ ಎಂದರು.

ವಿಶ್ವ ರ್ಯಾಂಕಿಂಗ್ ಕೋಟಾದ ಮೂಲಕ ದ್ಯುತಿ ಚಾಂದ್ 100 ಮೀಟರ್ ಮತ್ತು 200 ಮೀಟರ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಇವರಲ್ಲದೆ ಹಾಕಿ ತಂಡದ ನಾಯಕ ಮನ್​ಪ್ರೀತ್ ಸಿಂಗ್, ಕುಸ್ತಿಪಟು ವಿನೇಶ್ ಪೋಗಾಟ್ ಮತ್ತು ಅವರ ತಂದೆ​, ಬಾಕ್ಸರ್​ ಆಶೀಷ್ ಕುಮಾರ್​ ಸೇರಿದಂತೆ ಹಲವಾರು ಅಥ್ಲೀಟ್​ಗಳ ಜೊತೆಗೆ ಸಂವಾದ ನಡೆಸಿದ ಮೋದಿ, ಎಲ್ಲರಿಗೂ ಶುಭ ಕೋರಿದರು.

Last Updated : Jul 13, 2021, 10:48 PM IST

ABOUT THE AUTHOR

...view details