ನವದೆಹಲಿ:ಆಯ್ಕೆಯಾಗಿ ನಾಲ್ಕೇ ದಿನದಲ್ಲಿ ಅಮಾನತಾದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್ ಸಿಂಗ್ ಅವರು ಸಂಸ್ಥೆಯ ಮೇಲಿನ ನಿಷೇಧವನ್ನು ತೆರವು ಮಾಡುವಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಲ್ಲಿ ಸೋಮವಾರ ಮನವಿ ಮಾಡಿದರು. ಜೊತೆಗೆ ಮಾಜಿ ಅಧ್ಯಕ್ಷರ ಹಿಡಿತದಲ್ಲಿ ಸಂಸ್ಥೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಭಾನುವಾರವಷ್ಟೇ ಕುಸ್ತಿ ಫೆಡರೇಷನ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ನಿಯಮ ಉಲ್ಲಂಘನೆ ಆರೋಪದಡಿ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಆದೇಶಿಸಿತ್ತು. ಸಂಸ್ಥೆಯ ಮಾಜಿ ಅಧ್ಯಕ್ಷ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತರೂ ಆಗಿರುವ ಸಂಜಯ್ ಸಿಂಗ್ ನಾಲ್ಕು ದಿನಗಳ ಹಿಂದಷ್ಟೇ ಕುಸ್ತಿ ಫೆಡರೇಷನ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದರ ಬೆನ್ನಲ್ಲೇ ಅಂಡರ್ 19 ಮತ್ತು 20 ರೊಳಗಿನ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯನ್ನು ಘೋಷಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸದೇ, ಸ್ಪರ್ಧೆಗಳನ್ನು ಘೋಷಿಸಿದ ಆಪಾದನೆ ಕೇಳಿ ಬಂದಿತ್ತು. ಅಲ್ಲದೇ, ಸ್ಪರ್ಧೆಗಳಿಗೆ ತಯಾರಾಗಲು ಕ್ರೀಡಾಪಟುಗಳಿಗೆ ಕಾಲಾವಕಾಶ ಕೂಡ ನೀಡಲಾಗಿಲ್ಲ. ಇದು ತರಾತುರಿಯ ನಿರ್ಧಾರವಾಗಿದೆ. ಜೊತೆಗೆ ಮಾಜಿ ಪದಾಧಿಕಾರಿಗಳ ಒತ್ತಡಕ್ಕೆ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಲಾಗಿತ್ತು.
ಹಿರಿಯ ಕುಸ್ತಿಪಟುಗಳ ವಿರೋಧ:ಇನ್ನು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ ಸೇರಿದಂತೆ ಹಲವು ಹಿರಿಯ ಫೈಲ್ವಾನ್ಗಳು ಸಂಜಯ್ ಸಿಂಗ್ ಅವರ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಜೊತೆಗೆ ಕ್ರೀಡೆಯಿಂದಲೇ ನಿವೃತ್ತಿ ಘೋಷಿಸಿದ್ದರು. ಭಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡುವುದಾಗಿ ಘೋಷಿಸಿದ್ದರು. ಇದಕ್ಕೆ ಮಣಿದ ಸರ್ಕಾರ ತಕ್ಷಣಕ್ಕೆ ಜಾರಿಗೆ ಬರುವಂತೆ ಕುಸ್ತಿ ಫೆಡರೇಷನ್ ಅನ್ನು ಅಮಾನತು ಮಾಡಿತ್ತು.
ಇದರಿಂದಾಗಿ ತಾವು ತಳೆದ ನಿರ್ಧಾರಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಹೊಸ ಅಧ್ಯಕ್ಷ ಸಂಜಯ್ ಸಿಂಗ್ ಅವರು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು. ಹೊಸ ಪದಾಧಿಕಾರಿಗಳ ಅಮಾನತಿಗೆ ಕಾರಣವಾದ ಅಂಡರ್ 15 ಮತ್ತು 20 ರೊಳಗಿನ ಕುಸ್ತಿ ಸ್ಪರ್ಧೆಯ ಬಗ್ಗೆ ಎಲ್ಲರ ಜೊತೆ ಚರ್ಚಿಸಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚುನಾವಣೆಗಳು ನಡೆದ ಬಳಿಕ ತಾತ್ಕಾಲಿಕ ಸಮಿತಿಯು ಸಾಮಾನ್ಯ ಸಭೆಯನ್ನು ಕರೆದಿತ್ತು. ಬಳಿಕ ಆ ಸಭೆಯನ್ನು ಮುಂದೂಡಲಾಯಿತು. 24 ರಾಜ್ಯಗಳ ನಿಯೋಗಗಳ ಜೊತೆಗೆ ಸಭೆ ನಡೆಸಲು ನಿರ್ಧರಿಸಿದ್ದೇವೆ. ಹೀಗಾಗಿ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಅವರು ಸಚಿವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಹೊಸದಾಗಿ ಚುನಾಯಿತವಾದ ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಿದ ಕೇಂದ್ರ ಸರ್ಕಾರ