ಓರ್ಲಿಯನ್ಸ್ (ಫ್ರಾನ್ಸ್):ಓರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ 2023 ರನ್ನು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ತಮ್ಮ ಕಮ್ಬ್ಯಾಕ್ ಎಂದೇ ಕರೆದುಕೊಂಡಿದ್ದರು. ಆದರೆ, ಅವರಿಗೆ ಮೊದಲ ಸುತ್ತಿನಲ್ಲೇ ನಿರಾಸೆಯಾಗಿದೆ. ಟರ್ಕಿಯ ನೆಸ್ಲಿಹಾನ್ ಯಿಗಿತ್ ವಿರುದ್ಧ ಆರಂಭಿಕ ಸುತ್ತಿನಲ್ಲಿ 16-21, 14-21 ರಿಂದ ಸೋಲನುಭವಿಸಿದ್ದಾರೆ. ಪರಿಣಾಮ, ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 300 ಈವೆಂಟ್‌ನಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶದ ದಿನವಾಗಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ ಎರಡನೇ ಸುತ್ತು ಪ್ರವೇಶಿಸಿದರೆ, ತಸ್ನಿಮ್ ಮಿರ್, ಆಕರ್ಷಿ ಕಶ್ಯಪ್ (ಮಹಿಳೆಯರ ಸಿಂಗಲ್ಸ್) ಮತ್ತು ಸಮೀರ್ ವರ್ಮಾ ಸೋತಿದ್ದಾರೆ. ಮೊದಲ ಸುತ್ತಿನಲ್ಲಿ ಪ್ರಿಯಾಂಶು ರಾಜಾವತ್ 21-18, 21-13 ರಲ್ಲಿ ತನ್ನ ದೇಶದ ಕಿರಣ್ ಜಾರ್ಜ್ ವಿರುದ್ಧ ಸೋಲೊಪ್ಪಿಕೊಂಡರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನ್ಯಾ ಹೇಮಂತ್ 21-17, 21-18 ರಲ್ಲಿ ಫ್ರಾನ್ಸ್‌ನ ಹುಯೆಟ್ ಲಿಯೊನಿಸ್ ಅವರನ್ನು 40 ನಿಮಿಷಗಳಲ್ಲಿ ಮಣಿಸಿದರು. ಆದರೆ ಆಕರ್ಷಿ ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲಿ 8-21, 21-13, 8-21 ರಿಂದ ಜರ್ಮನ್ ಸ್ಪರ್ಧಿ ವಿರುದ್ಧ ಮಂಡಿಯೂರಿದರು. ತಸ್ನಿಮ್ ಮಿರ್ ಮೂರು ಗೇಮ್‌ಗಳಲ್ಲಿ 22-20, 13-21, 5-21 44 ನಿಮಿಷಗಳ ಹಣಾಹಣಿಯಲ್ಲಿ ಜರ್ಮನಿಯ ಯವೊನೆ ಲಿ ವಿರುದ್ಧ ಸೋತು ನಿರಾಶೆ ಅನುಭವಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ 24-22, 25-23ರಲ್ಲಿ ಡೆನ್‌ಮಾರ್ಕ್‌ನ ವಿಕ್ಟರ್ ಸ್ವೆಂಡ್‌ಸೆನ್ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು. ಇನ್ನೊಂದು ಪಂದ್ಯದಲ್ಲಿ, ಭಾರತದ ಸಮೀರ್ ವರ್ಮಾ ಮೂರು ಗೇಮ್‌ಗಳಲ್ಲಿ ನ್ಯಾಟ್ ನ್ಗುಯೆನ್ ವಿರುದ್ಧ ಸೋತರು. ಸುಮಾರು ಒಂದೂವರೆ ಗಂಟೆಗಳ ಪೈಪೋಟಿಯಲ್ಲಿ 21-19, 19-21, 17-21 ರಿಂದ ಪರಾಭವಗೊಂಡರು.