ಹೈದರಾಬಾದ್: ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಪಿಎಫ್) ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಮೂರನೇ ಕುಸ್ತಿಪಟುವಿನಿಂದ ವಿರೋಧ ವ್ಯಕ್ತವಾಗಿದೆ. ತಾರಾ ಕುಸ್ತಿಪಟು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಮಂಗಳವಾರ ತಮ್ಮ ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ಖಾತೆಯಾದ ಎಕ್ಸ್ ಆ್ಯಪ್ನಲ್ಲಿ ಸುದೀರ್ಘ ಬರವಣಿಗೆ ಇರುವ ಪತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ವಿನೇಶ್ ಫೋಗಟ್, "ನಾನು ನನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ನಮ್ಮನ್ನು ಈ ಸ್ಥಿತಿಗೆ ತಂದ ಪ್ರಭಾವಿಗಳಿಗೆ ಧನ್ಯವಾದಗಳು" ಬರೆದುಕೊಂಡಿದ್ದಾರೆ. ಪೋಸ್ಟ್ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಲಾಗಿದೆ.
"ನನಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ನೀಡಲಾಯಿತು. ಆದರೆ ದುರದೃಷ್ಟವಶಾತ್ ನನ್ನ ಜೀವನದಲ್ಲಿ ಅದಕ್ಕೆ ಯಾವುದೇ ಅರ್ಥವಿಲ್ಲ. ಪ್ರತಿಯೊಬ್ಬ ಮಹಿಳೆ ಗೌರವದಿಂದ ಬದುಕಲು ಬಯಸುತ್ತಾರೆ. ಹಾಗಾಗಿ ಪ್ರಧಾನಿ ಅವರೇ, ನಾನು ಅದನ್ನು ಹಿಂದಿರುಗಿಸಲು ಬಯಸುತ್ತೇನೆ" ಎಂದು ಬರೆದಿದ್ದಾರೆ.
ನಾನು ಈ ಸಂಪೂರ್ಣ ಘಟನೆಯನ್ನು ಮರೆಯಲು ಹಲವು ಬಾರಿ ಪ್ರಯತ್ನಿಸಿದೆ, ಆದರೆ ಅದು ಅಷ್ಟು ಸುಲಭವಲ್ಲ. ಸರ್ ನಿಮ್ಮನ್ನು ಭೇಟಿಯಾದಾಗ ಇದನ್ನೆಲ್ಲಾ ಹೇಳಿದ್ದೆ. ನ್ಯಾಯಕ್ಕಾಗಿ ಕಳೆದ ಒಂದು ವರ್ಷದಿಂದ ಬೀದಿಗಿಳಿದಿದ್ದೇವೆ. ಯಾರೂ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ತಮ್ಮ ಬೇಸರವನ್ನೂ ಹೊರಹಾಕಿದ್ದಾರೆ.