ಮುಂಬೈ: ಪುರುಷರ ಹಾಕಿ ಫೈವ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಬಗ್ಗು ಬಡಿದಿದೆ. ಈ ಮೂಲಕ ಹಾಕಿ ಫೈವ್ಸ್ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ರಶಸ್ತಿ ಗೆದ್ದು ದೇಶಕ್ಕೆ ಹಿರಿಮೆ ತಂಡ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಇನ್ನೊಂದೆಡೆ, ಚಾಂಪಿಯನ್ ತಂಡದ ಪ್ರತಿ ಆಟಗಾರನಿಗೆ ಹಾಕಿ ಇಂಡಿಯಾವು ತಲಾ 2 ಲಕ್ಷ ರೂ. ಬಹುಮಾನ ಘೋಷಿಸಿದೆ. ಶನಿವಾರ ಒಮನ್ನ ಸಲಾಲಾದಲ್ಲಿ ಪಂದ್ಯ ನಡೆಯಿತು.
ಪ್ರಧಾನಿ ಮೋದಿ ಮೆಚ್ಚುಗೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯ Xನಲ್ಲಿ ಆಟಗಾರರನ್ನು ಅಭಿನಂದಿಸಿ ಹುರಿದುಂಬಿಸಿದ್ದಾರೆ."ಅಪೂರ್ವ ಜಯ ಸಾಧಿಸಿದ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಆಟಗಾರರ ಅಚಲ ಸಮರ್ಪಣೆಗೆ ಸಾಕ್ಷಿ. ಈ ಗೆಲುವಿನೊಂದಿಗೆ ಮುಂದಿನ ವರ್ಷ ನಡೆಯಲಿರುವ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ. ನಮ್ಮ ಆಟಗಾರರ ಶ್ರದ್ಧೆ ಮತ್ತು ದೃಢತೆ ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ" ಎಂದು ಶ್ಲಾಘಿಸಿದ್ದಾರೆ.
ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂ: ಆಟಗಾರರಿಗೆ ತಲಾ 2 ಲಕ್ಷ ರೂ. ನೀಡುತ್ತಿರುವ ಹಾಕಿ ಇಂಡಿಯಾ, ತಂಡದ ಗೆಲುವಿನಲ್ಲಿ ಶ್ರಮಿಸಿದ ಸಹಾಯಕ ಸಿಬ್ಬಂದಿಗೂ ತಲಾ 1 ಲಕ್ಷ ರೂ. ನೀಡಲು ನಿರ್ಧರಿಸಿದೆ. ಈ ಗೆಲುವಿನ ಮೂಲಕ ಪುರುಷರ ಹಾಕಿ ಫೈವ್ಸ್ ಮಸ್ಕತ್ನಲ್ಲಿ ಜನವರಿಯಲ್ಲಿ ನಡೆಯುವ ವಿಶ್ವಕಪ್ 2024ಗೆ ಭಾರತ ಅರ್ಹತೆ ಗಿಟ್ಟಿಸಿಕೊಂಡಿದೆ.
ಹಾಕಿ ಇಂಡಿಯಾ ಅಧ್ಯಕ್ಷ ಪದ್ಮಶ್ರೀ ಡಾ. ದಿಲೀಪ್ ಟಿರ್ಕಿ, ಒಮನ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬರೂ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. ಹಲವು ತಿಂಗಳುಗಳ ಕಠಿಣ ಪರಿಶ್ರಮದ ಫಲ ಇದು ಎಂದು ಹೇಳಿದ್ದಾರೆ. ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪಂದ್ಯಾಟದಲ್ಲಿ ಅದ್ಭುತ ಸಾಧನೆ ಮಾಡಿದ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಅಮೋಘ ಪ್ರದರ್ಶನದ ಮೂಲಕ ಮತ್ತೊಮ್ಮೆ ದೇಶಕ್ಕೆ ತಂಡ ಹೆಮ್ಮೆ ತಂದಿದೆ. ಇನ್ನು ಮುಂದೆಯೂ ನಮ್ಮ ಆಟಗಾರರು ಇದೇ ಗೆಲುವನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ. (ಪಿಟಿಐ)
ಇದನ್ನೂ ಓದಿ;ಏಷ್ಯಾಕಪ್ 2023: ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ.. ಸೂಪರ್-4 ಹಂತಕ್ಕೆ ಬಾಬರ್ ಪಡೆ