ದೋಹಾ (ಕತಾರ್):ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ರೆಫ್ರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಫ್ರಾನ್ಸ್ನ ಮಹಿಳಾ ರೆಫ್ರಿ ಸ್ಟೆಫಾನಿ ಫ್ರಾಪಾರ್ಟ್ ಅವರು ನಾಳೆ (ಡಿ.1 ರಂದು) ನಡೆಯುವ ಜರ್ಮನಿ ಮತ್ತು ಕೋಸ್ಟರಿಕಾ ಪಂದ್ಯದಲ್ಲಿ ತೀರ್ಪುಗಾರರಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಸ್ಟೆಫಾನಿ ಅವರು ಪುರುಷರ ಫುಟ್ಬಾಲ್ ಪಂದ್ಯದಲ್ಲಿ ರೆಫ್ರಿಯಾದ ಮೊದಲ ಮಹಿಳೆ ಎಂಬ ದಾಖಲೆ ಬರೆಯಲಿದ್ದಾರೆ.
ಅಲ್ಲದೇ, ಸ್ಟೆಫಾನಿ ಫ್ರಾಪಾರ್ಟ್ ಅವರಿಗೆ ಸಹಾಯಕ ರೆಫ್ರಿಗಳಾಗಿ ಬ್ರೆಜಿಲ್‌ನ ನ್ಯೂಜಾ ಬ್ಯಾಕ್ ಮತ್ತು ಮೆಕ್ಸಿಕೊದ ಕರೆನ್ ಡಯಾಜ್ ಮದೀನಾ ಅವರನ್ನು ನೇಮಿಸಲಾಗಿದೆ. ಜರ್ಮನಿ - ಕೋಸ್ಟರಿಕಾ ಪಂದ್ಯ ಪೂರ್ಣವಾಗಿ ಮಹಿಳಾ ರೆಫ್ರಿಗಳಿಂದ ಕೂಡಿರಲಿದೆ ಎಂಬುದು ವಿಶೇಷವಾಗಿದೆ.
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ 44 ನೇ ಪಂದ್ಯದಲ್ಲಿ ಮಹಿಳಾ ರೆಫ್ರಿಗಳನ್ನು ನೇಮಕ ಮಾಡಲಾಗಿದ್ದು, ನಾಲ್ಕನೇ ರೆಫ್ರಿ ಅಂದರೆ, ವಿಡಿಯೋ ವಿಮರ್ಶಕರಾಗಿ ಅಮೆರಿಕದ ಕ್ಯಾಥರಿನ್ ನೆಸ್ಬಿಟ್ ಅವರೂ ಪಂದ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸ್ಟೆಫಾನಿ ಫ್ರಾಪಾರ್ಟ್ ಅವರಿಗೆ ಇದು ಅಧಿಕೃತವಾಗಿ ನಾಲ್ಕನೇ ಪುರುಷ ಫುಟ್ಬಾಲ್ ಟೂರ್ನಿಯಾಗಿದೆ. ಈ ಹಿಂದೆ ಅವರು ಯುಇಎಫ್ಎ ಆಯೋಜಿಸಿದ ಟೂರ್ನಿ, ವಿಶ್ವಕಪ್ ಅರ್ಹತಾ ಪಂದ್ಯಗಳು, ಚಾಂಪಿಯನ್ಸ್ ಲೀಗ್ ಮತ್ತು ಫ್ರೆಂಚ್ ಕಪ್ನ ಫೈನಲ್ ಪಂದ್ಯದಲ್ಲಿ ರೆಫ್ರಿಯಾಗಿದ್ದರು. 2019 ರ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಅಂಪೈರ್ ಆಗಿದ್ದರು.
ಓದಿ:ಅರ್ಜೆಂಟೀನಾ ಸೋತಾಗ ಕಣ್ಣೀರು ಹಾಕಿದ್ದ ಅಭಿಮಾನಿಗೆ ಕತಾರ್ಗೆ ಹಾರುವ ಭಾಗ್ಯ!