ಕರ್ನಾಟಕ

karnataka

ಏಳು ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ಒದಗಿಸಿದ ದೆಹಲಿ ಪೊಲೀಸರು

By

Published : Apr 30, 2023, 4:02 PM IST

ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್​ಐಆರ್​ ದಾಖಲಾದ ನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ ದೆಹಲಿ ಪೊಲೀಸ್ ಇಲಾಖೆ ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ನೀಡಿದೆ.

Delhi Police provide security to 7 women wrestlers
7 ಮಹಿಳಾ ಕುಸ್ತಿಪಟುಗಳಿಗೆ ಪೊಲೀಸ್​ ಭದ್ರತೆ: ದೂರು ದಾರರಿಂದ ಶ್ರೀಘ್ರವೇ ಹೇಳಿಕೆ ಸಂಗ್ರಹ

ನವದೆಹಲಿ:ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಎಲ್ಲ ಏಳು ಮಹಿಳಾ ಕುಸ್ತಿಪಟುಗಳಿಗೆ ದೆಹಲಿ ಪೊಲೀಸರು ಇಂದು (ಭಾನುವಾರ) ವಿಶೇಷ ಭದ್ರತೆ ಒದಗಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿದೆ.

ಪ್ರಕರಣದ ತನಿಖೆ ನಡೆಸಲು ಮತ್ತು ಸಿಆರ್‌ಪಿಸಿ ಕಲಂ 161 ಅನ್ವಯ ಹೇಳಿಕೆ ದಾಖಲಿಸಲು ಈಗಾಗಲೇ ದೂರುದಾರ ಮಹಿಳಾ ಕುಸ್ತಿಪಟುಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಹೇಳಿಕೆಗಳ ಅನ್ವಯ ಸಿಂಗ್​ ವಿರುದ್ಧ ಪೊಲೀಸರು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳಲ್ಲಿ ಕುಸ್ತಿಪಟುಗಳು ತಮ್ಮ ಹೇಳಿಕೆಗಳನ್ನು ದಾಖಲಿಸಲು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗೆ ಆಗಮಿಸಬಹುದು ಎಂದು ಮೂಲಗಳು ತಿಳಿಸಿವೆ.

ಸಿಂಗ್ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲಿ ಒಂದರ ಪ್ರತಿಯನ್ನು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ನೀಡಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಿಸಲಾದ ಇತರ ಎಫ್‌ಐಆರ್‌ ಪ್ರತಿಗಳನ್ನು ಕುಸ್ತಿಪಟುಗಳಿಗೆ ನೀಡಲಾಗಿಲ್ಲ. ಅದನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಶೀಘ್ರದಲ್ಲೇ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜನವರಿಯಲ್ಲಿ ಶುರುವಾದ ಪ್ರತಿಭಟನೆ:ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿದರೆ ವೃತ್ತಿ ಜೀವನವನ್ನೇ ಹಾಳು ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಶುರು ಮಾಡಿದ್ದರು. ಆಗ ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಮತ್ತು ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳ ಕುರಿತು ಮೇಲುಸ್ತುವಾರಿ ಸಮಿತಿಯನ್ನು ಪಿ.ಟಿ.ಉಷಾ ಮುಂದಾಳತ್ವದಲ್ಲಿ ನೇಮಕ ಮಾಡಿತ್ತು.

ಸಮಿತಿ ರಚನೆಯ ನಂತರ ವರದಿಗಾಗಿ ಕುಸ್ತಿಪಟುಗಳು ಅವಕಾಶ ನೀಡಿ ಪ್ರತಿಭಟನೆ ನಿಲ್ಲಿಸಿದ್ದರು. ಇತ್ತೀಚೆಗೆ ನೊಂದ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಆದರೆ, ದೂರು ಸ್ವೀಕರಿಸಿದ ಪೊಲೀಸರು ಎಫ್​ಐಆರ್​ ದಾಖಲಿಸುತ್ತಿಲ್ಲ ಎಂದು ಕಳೆದ ಭಾನುವಾರದಿಂದ ದೆಹಲಿಯ ಜಂತರ್ ಮಂತರ್​ನಲ್ಲಿ ಧರಣಿ ನಡೆಸುತ್ತಿದ್ದಾರೆ.

ಅಲ್ಲದೇ, ದೂರು ದಾಖಲಾಗದ ಬಗ್ಗೆ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಈ ಆರೋಪವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ಎಫ್ಐಆರ್​ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಈ ಆದೇಶದ ಮೇರೆಗೆ ಶುಕ್ರವಾರ ರಾತ್ರಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು.

ಇದನ್ನೂ ಓದಿ:ಬ್ರಿಜ್​ ಭೂಷಣ್​​ ವಿರುದ್ಧದ ಎಫ್‌ಐಆರ್‌ನಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್‌ ಹೆಸರು ಉಲ್ಲೇಖ

ABOUT THE AUTHOR

...view details